ಸಂಸತ್ತು ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಕರೆ ನೀಡಿದ ಜಪಾನ್ ಪ್ರಧಾನಿ

PC | x.com/takaichi_sanae
ಟೋಕಿಯೊ: ತಾನು ಶುಕ್ರವಾರ ಸಂಸತ್ತನ್ನು ವಿಸರ್ಜಿಸುತ್ತೇನೆ ಹಾಗೂ ತನ್ನ ವೆಚ್ಚ ಯೋಜನೆಗಳು ಮತ್ತು ಇತರ ನೀತಿಗಳಿಗೆ ಜನರ ಬೆಂಬಲವನ್ನು ಕೋರಿ ಮಧ್ಯಂತರ ಚುನಾವಣೆಗೆ ಕರೆ ನೀಡುತ್ತೇನೆ ಎಂದು ಜಪಾನ್ ಪ್ರಧಾನಿ ಸನಯೆ ಟಕಯೀಚಿ ಸೋಮವಾರ ಘೋಷಿಸಿದ್ದಾರೆ.
ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅವರು ಅಧಿಕಾರ ವಹಿಸಿಕೊಂಡ ಕೇವಲ ಮೂರು ತಿಂಗಳುಗಳಲ್ಲಿ ಮಧ್ಯಂತರ ಚುನಾವಣೆಯ ಘೋಷಣೆಯಾಗಿದೆ.
‘‘ಜನವರಿ 23ರಂದು ಕೆಳಮನೆಯನ್ನು ವಿಸರ್ಜಿಸುವುದಾಗಿ ಇಂದು ಪ್ರಧಾನಿಯಾಗಿ ನಾನು ನಿರ್ಧರಿಸಿದ್ದೇನೆ’’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಕಯೀಚಿ ಹೇಳಿದರು.
ಸಂಸತ್ನ ಕೆಳಮನೆಯ ಎಲ್ಲಾ 465 ಸ್ಥಾನಗಳಿಗೆ ಫೆಬ್ರವರಿ 8ರಂದು ಮಧ್ಯಂತರ ಚುನಾವಣೆಯು ನಡೆಯಲಿದೆ. ಇದು ಪ್ರಧಾನಿಯಾದ ಬಳಿಕ ಟಕಯೀಚಿಯ ಮೊದಲ ಚುನಾವಣಾ ಪರೀಕ್ಷೆಯಾಗಿದೆ. ತನ್ನ ಪ್ರಬಲ ಜನ ಬೆಂಬಲವನ್ನು ಬಳಸಿಕೊಂಡು ಆಡಳಿತಾರೂಢ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ಡಿಪಿ)ಯ ಮೇಲಿನ ಹಿಡಿತವನ್ನು ಬಲಪಡಿಸಲು ಹಾಗೂ ತನ್ನ ಮೈತ್ರಿಕೂಟದ ಅಲ್ಪ ಬಹುಮತವನ್ನು ಹೆಚ್ಚಿಸಲು ಈ ಚುನಾವಣೆಯು ಅವರಿಗೆ ಸಹಾಯ ಮಾಡಲಿದೆ.
ಹೆಚ್ಚುತ್ತಿರುವ ಜೀವನ ವೆಚ್ಚವು ಜನರ ಪ್ರಧಾನ ಕಳವಳವಾಗಿರುವಾಗ ಅಗಾಧ ವೆಚ್ಚದ ಯೋಜನೆಗಳಿಗೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಚುನಾವಣೆಯು ಪತ್ತೆ ಹಚ್ಚಲಿದೆ. ಸರಕಾರಿ ಟೆಲಿವಿಶನ್ ಎನ್ಎಚ್ಕೆ ಕಳೆದ ವಾರ ನಡೆಸಿದ ಸಮೀಕ್ಷೆಯೊಂದರಲ್ಲಿ, ಬೆಲೆ ಏರಿಕೆಯು ತಮ್ಮ ಮುಖ್ಯ ಚಿಂತೆಯಾಗಿದೆ ಎಂಬುದಾಗಿ 45 ಶೇಕಡ ಮಂದಿ ಪ್ರತಿಕ್ರಿಯಿಸಿದ್ದಾರೆ.







