ಪ್ರಾದೇಶಿಕ ಸಮಗ್ರತೆ ಬಲವರ್ಧನೆಗೆ ಜಂಟಿ ಪ್ರಯತ್ನ
ಆಸಿಯಾನ್ ಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

Photo- PTI
ಜಕಾರ್ತ: ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬಲಪಡಿಸಲು ಪ್ರತಿಯೊಬ್ಬರ ಬದ್ಧತೆ ಮತ್ತು ಜಂಟಿ ಪ್ರಯತ್ನಗಳ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಗುರುವಾರ ಇಂಡೊನೇಶ್ಯಾದ ಜಕಾರ್ತದಲ್ಲಿ ಆಸಿಯಾನ್- ಭಾರತ ಮತ್ತು ಪೂರ್ವ ಏಶ್ಯಾ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು `ದಕ್ಷಿಣ ಚೀನಾ ಸಮುದ್ರದ ನೀತಿ ಸಂಹಿತೆʼ ಪರಿಣಾಮಕಾರಿಯಾಗಿರಬೇಕು ಮತ್ತು `ಸಮುದ್ರದ ಕಾನೂನಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ಣಯ'ಕ್ಕೆ ಅನುಗುಣವಾಗಿರಬೇಕು ಎಂದರು. ಪ್ರಸ್ತುತ ಜಾಗತಿಕ ಸನ್ನಿವೇಶವು ಅನಿಶ್ಚಿತತೆಯಿಂದ ಸುತ್ತುವರಿದಿದೆ. ಭಯೋತ್ಪಾದನೆ, ಉಗ್ರವಾದ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳು ನಮ್ಮೆಲ್ಲರಿಗೂ ಸವಾಲಾಗಿದೆ. ರಾಜತಾಂತ್ರಿಕತೆ ಮತ್ತು ಮಾತುಕತೆಯೇ ಪರಿಹಾರಕ್ಕೆ ಏಕೈಕ ಮಾರ್ಗವಾಗಿದೆ' ಎಂದರು.
ಶೃಂಗಸಭೆಯಲ್ಲಿ ಪ್ರಧಾನಿಯ ಭಾಗವಹಿಸುವಿಕೆ ಭಾರತ-ಆಸಿಯಾನ್ ಸಂಬಂಧಗಳಿಗೆ ಕಾರ್ಯತಂತ್ರದ ದಿಕ್ಕನ್ನು ನೀಡಲಿದೆ. ಸಂಪರ್ಕ, ಕಡಲ ಸಹಕಾರ, ಡಿಜಿಟಲ್ ರೂಪಾಂತರ, ವ್ಯಾಪಾರ ಮತ್ತು ಆರ್ಥಿಕತೆ, ಪರಿಸರ, ಆರೋಗ್ಯ ಮತ್ತು ಸಾಂಪ್ರದಾಯಿಕ ಔಷಧ ಮುಂತಾದ ಕ್ಷೇತ್ರಗಳನ್ನು ಒಳಗೊಂಡಂತೆ ಪ್ರಧಾನಮಂತ್ರಿ ಸಮಗ್ರ ಚರ್ಚೆಯನ್ನು ನಡೆಸಿದ್ದಾರೆ ಎಂದು ಭಾರತದ ವಿದೇಶಾಂಗ ಇಲಾಖೆ ಟ್ವೀಟ್ ಮಾಡಿದೆ.
ಆಸಿಯಾನ್- ಭಾರತ ಮತ್ತು ಪೂರ್ವ ಏಶ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳಿವು:
► ಭಾರತ ಮತ್ತು ಆಸಿಯಾನ್ ನಡುವೆ ಸಮುದ್ರ ಸಹಕಾರ ಮತ್ತು ಆಹಾರ ಭದ್ರತೆಗೆ ಇನ್ನಷ್ಟು ಕ್ರಮಗಳ ಅಗತ್ಯವಿದೆ. ಸಮುದ್ರ ಸಹಕಾರ ಕ್ಷೇತ್ರವು ಕಡಲ ಪ್ರದೇಶಗಳ ಸುರಕ್ಷತೆ ಮತ್ತು ಭದ್ರತೆ, ಕಡಲ ವ್ಯಾಪ್ತಿಯ ಬಗ್ಗೆ ಜಾಗೃತಿ, ವಿಪತ್ತು ನಿರ್ವಹಣೆ ಇತ್ಯಾದಿಗಳನ್ನು ಒಳಗೊಂಡಿದೆ. ಆಹಾರ ಭದ್ರತೆ ವಿಷಯದಲ್ಲಿ ರಾಗಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಇದು ಆಹಾರ ಭದ್ರತೆಯ ಜತೆಗೆ ಪರಿಸರಕ್ಕೂ ಪೂರಕವಾಗಿದೆ.
► ಡಿಜಿಟಲ್ ಭವಿಷ್ಯಕ್ಕಾಗಿ ಆಸಿಯಾನ್-ಇಂಡಿಯಾ ನಿಧಿ ಸ್ಥಾಪನೆ. ಇದು ಆಸಿಯಾನ್ ಮತ್ತು ಭಾರತದ ನಡುವೆ ಆರ್ಥಿಕ ಸಂವಹನವನ್ನು ಒದಗಿಸುತ್ತದೆ.
► ಆಸಿಯಾನ್ ವಿಚಾರ ವೇದಿಕೆಗೆ ಭಾರತದ ಬೆಂಬಲ.
► ಟಿಮೊರ್-ಲೆಸ್ಟೆ ದೇಶದಲ್ಲಿ ಭಾರತದ ರಾಯಭಾರ ಕಚೇರಿ ಆರಂಭ. ಆಸಿಯಾನ್ ಒಕ್ಕೂಟದಲ್ಲಿ ಟಿಮೊರ್-ಲೆಸ್ಟೆ ಈಗ ವೀಕ್ಷಕ ಸ್ಥಾನಮಾನ ಹೊಂದಿದೆ.
ಸ್ವತಂತ್ರ, ಮುಕ್ತ ಮತ್ತು ನಿಯಮಾಧಾರಿತ ಇಂಡೊ-ಪೆಸಿಫಿಕ್ ವ್ಯವಸ್ಥೆ ಸ್ಥಾಪನೆಗೆ ಚರ್ಚೆ ಮತ್ತು ಸಂವಾದದ ಅಗತ್ಯವಿದೆ. ಜತೆಗೆ ಜಿ20 ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಸಂಘಟನೆಗಳಲ್ಲಿ ಜಾಗತಿಕ ದಕ್ಷಿಣದ ಧ್ವನಿಯನ್ನು ವರ್ಧಿಸುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.