ಕೆನ್ಯಾ | ಮಸಾಯಿ ಮಾರಾದಲ್ಲಿ ವಿಮಾನ ಪತನ : 10 ವಿದೇಶಿಯರು ಸೇರಿ 11 ಮಂದಿ ಮೃತ್ಯು

Photo | ndtv
ನೈರೋಬಿ,ಅ.28: ಕೆನ್ಯಾದ ಪ್ರಸಿದ್ಧ ಪ್ರವಾಸಿ ತಾಣ ಮಸಾಯಿ ಮಾರಾ ರಾಷ್ಟ್ರೀಯ ಉದ್ಯಾನವನದತ್ತ ತೆರಳುತ್ತಿದ್ದ ಲಘು ಪ್ರಯಾಣಿಕ ವಿಮಾನವೊಂದು ಮಂಗಳವಾರ ಬೆಳಿಗ್ಗೆ ಪತನಗೊಂಡು, ವಿದೇಶಿಯರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 11 ಮಂದಿ ಮೃತಪಟ್ಟಿದ್ದಾರೆ.
ಮೊಂಬಾಸಾ ಏರ್ ಸಫಾರಿ ಸಂಸ್ಥೆಗೆ ಸೇರಿದ ಈ ವಿಮಾನವು ಕರಾವಳಿಯ ಡಯಾನಿ ಪ್ರದೇಶದಿಂದ ಮಸಾಯಿ ಮಾರಾದ ಕಿಚ್ವಾ ಟೆಂಬೊ ಕಡೆಗೆ ಹೊರಟಿತ್ತು. ಸ್ಥಳೀಯ ಸಮಯ ಬೆಳಿಗ್ಗೆ ಸುಮಾರು 5.30ರ ಸುಮಾರಿಗೆ (0230 GMT) ವಿಮಾನ ಪತನಗೊಂಡಿತು ಎಂದು ಸಂಸ್ಥೆಯ ಅಧ್ಯಕ್ಷ ಜಾನ್ ಕ್ಲೀವ್ ದೃಢಪಡಿಸಿದ್ದಾರೆ.
ಮೃತಪಟ್ಟವರಲ್ಲಿ ಎಂಟು ಮಂದಿ ಹಂಗೇರಿಯವರು, ಇಬ್ಬರು ಜರ್ಮನ್ ಪ್ರಜೆಗಳು ಮತ್ತು ಒಬ್ಬ ಕೆನ್ಯಾದ ಪೈಲಟ್ ಸೇರಿದ್ದಾರೆ. "ಯಾರೂ ಬದುಕುಳಿದಿಲ್ಲ. ನಮ್ಮ ತುರ್ತು ಪ್ರತಿಕ್ರಿಯಾ ತಂಡ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದೆ,” ಎಂದು ಜಾನ್ ಕ್ಲೀವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆನ್ಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (ಕೆಸಿಎಎ) ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ 12 ಮಂದಿ ಇದ್ದರೆಂದು ತಿಳಿಸಲಾಗಿದೆ. ಆದರೆ ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪ್ರಾಧಿಕಾರವು ಸ್ಪಷ್ಟಪಡಿಸಿದೆ.







