ಅಮೆರಿಕ ತೊರೆದ ವಿಶ್ವದ ಜನಪ್ರಿಯ ಟಿಕ್ಟಾಕರ್ ಖಾಬಿ ಲೇಮ್ : ವಶಕ್ಕೆ ಪಡೆದು ದೇಶ ತೊರೆಯುವಂತೆ ಅಧಿಕಾರಿಗಳಿಂದ ಬಲವಂತ

Photo Credit: X/@AdameMedia
ವಾಶಿಂಗ್ಟನ್ : ಟಿಕ್ಟಾಕ್ನಲ್ಲಿ ವಿಶ್ವದ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಖಾಬಿ ಲೇಮ್ ವೀಸಾ ಅವಧಿ ಮೀರಿ ಅಮೆರಿಕದಲ್ಲಿ ಉಳಿದುಕೊಂಡಿದ್ದಕ್ಕೆ ವಲಸೆ ಅಧಿಕಾರಿಗಳು ವಶಕ್ಕೆ ಪಡೆದ ಬಳಿಕ ಅಮೆರಿಕವನ್ನು ತೊರೆದಿದ್ದಾರೆ.
ಟಿಕ್ಟಾಕ್ನಲ್ಲಿ 160 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇಟಾಲಿಯನ್-ಸೆನೆಗಲ್ನ ಲೇಮ್ ಅವರನ್ನು ಶುಕ್ರವಾರ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಗಡೀಪಾರು ಆದೇಶವಿಲ್ಲದೆ ದೇಶ ತೊರೆಯಲು ಅವರಿಗೆ ಅನುಮತಿಸಲಾಗಿದೆ ಎಂದು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆ(ICE) ಹೇಳಿಕೆಯಲ್ಲಿ ತಿಳಿಸಿದೆ.
ಆಫ್ರಿಕಾದ ಸೆನೆಗಲ್ನಲ್ಲಿ ಜನಿಸಿದ ಖಾಬಿ, ಚಿಕ್ಕವರಿದ್ದಾಗ ತಮ್ಮ ಪೋಷಕರೊಂದಿಗೆ ಇಟಲಿಗೆ ವಲಸೆ ಬಂದಿದ್ದರು. ಇಟಲಿ ಪೌರತ್ವ ಹೊಂದಿರುವ ಖಾಬಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಆಂಗಿಕ ಅಭಿನಯದ ಮೂಲಕ ಜನಪ್ರಿಯತೆ ಪಡೆದಿದ್ದರು.
ಲೇಮ್ 2023ರಿಂದ ʼಇಟಾಲಿಯಾಸ್ ಗಾಟ್ ಟ್ಯಾಲೆಂಟ್ʼ ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2022ರಲ್ಲಿ ‘ಹ್ಯೂಗೋ ಬಾಸ್’ ಬ್ರ್ಯಾಂಡ್ ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಮಾಡಿದ್ದ ಖಾಬಿ, ಯುನಿಸೆಫ್ನ ಸೌಹಾರ್ದ ರಾಯಭಾರಿಯಾಗಿ ನೇಮಕಗೊಂಡಿದ್ದರು