ಕಾರ್ಟೂನ್ ಮೂಲಕ ಟ್ರಂಪ್ ಅಣಕಿಸಿದ ಖಾಮಿನೈ

ಡೊನಾಲ್ಡ್ ಟ್ರಂಪ್ , ಆಯತುಲ್ಲಾ ಆಲಿ ಖಾಮಿನೈ | Photo Credit : AP \ PTI
ಟೆಹ್ರಾನ್, ಜ.12: ಇರಾನ್ ಮತ್ತು ಅಮೆರಿಕಾ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಣಕಿಸುವ ಕಾರ್ಟೂನ್ ಅನ್ನು ಪೋಸ್ಟ್ ಮಾಡಿದ್ದಾರೆ.
ಕಾರ್ಟೂನ್ ನಲ್ಲಿ ಟ್ರಂಪ್ ಅವರನ್ನು ಪ್ರಾಚೀನ ಈಜಿಪ್ಟ್ ಶೈಲಿಯ ಕಲ್ಲಿನ ಶವಪೆಟ್ಟಿಗೆಯೊಳಗೆ ಇರುವ ಮಮ್ಮಿ (ಶುಷ್ಕದೇಹ) ಎಂದು ಚಿತ್ರಿಸಲಾಗಿದ್ದು, ‘ಇದನ್ನೂ ಸಹ ಉರುಳಿಸಲಾಗುವುದು’ ಎಂಬ ಸಂದೇಶವನ್ನು ಹೊಂದಿದೆ. ಇದರ ಜೊತೆಗಿನ ಪೋಸ್ಟ್ನಲ್ಲಿ, ‘ಅಹಂಕಾರ ಮತ್ತು ಹೆಮ್ಮೆಯಿಂದ ಆಳುವ ನಾಯಕರು ಇಡೀ ಪ್ರಪಂಚದ ಮೇಲೆ ತೀರ್ಪು ನೀಡುತ್ತಾರೆ. ಐತಿಹಾಸಿಕ ನಿರಂಕುಶಾಧಿಕಾರಿಗಳಿಗೆ ಆದ ಗತಿ ಇವರಿಗೂ ಆಗಲಿದೆ. ಇಡೀ ಜಗತ್ತನ್ನು ನಿರ್ಣಯಿಸುತ್ತಾ ಹೆಮ್ಮೆ ಮತ್ತು ಅಹಂಕಾರದಿಂದ ಅಲ್ಲಿ ಕುಳಿತಿರುವ ಆ ಪಿತಾಮಹನು—ಸಾಮಾನ್ಯವಾಗಿ ಫರೋ (ಪ್ರಾಚೀನ ಈಜಿಪ್ಟ್ನ ರಾಜ), ನಿಮ್ರೋಡ್, ರೆಝಾ ಖಾನ್, ಮೊಹಮ್ಮದ್ ರೆಝಾ ಮತ್ತು ಅವರಂತರವರು ತಮ್ಮ ದುರಹಂಕಾರದ ಉತ್ತುಂಗದಲ್ಲಿದ್ದಾಗ ಉರುಳಿ ಹೋದಂತೆ—ತಾನೂ ಉರುಳಿಹೋಗುತ್ತೇನೆ ಎಂಬುದನ್ನು ತಿಳಿದಿರಬೇಕು’ ಎಂದು ಉಲ್ಲೇಖಿಸಲಾಗಿದೆ.





