"ಶತ್ರುಗಳಿಗೆ ಮಣಿಯುವುದಿಲ್ಲ”: ಟ್ರಂಪ್ಗೆ ಇರಾನ್ನ ಸರ್ವೋಚ್ಚ ನಾಯಕ ಖಾಮಿನೈ ತಿರುಗೇಟು

ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ (PTI)
ಟೆಹ್ರಾನ್: ಇರಾನ್ನಲ್ಲಿ ಹಣದುಬ್ಬರದಿಂದ ಭುಗಿಲೆದ್ದ ಪ್ರತಿಭಟನೆ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಭಟನಾಕಾರರ ನೆರವಿಗೆ ಬರುವುದಾಗಿ ಹೇಳಿದ್ದರು. ಆದರೆ, ಇದಕ್ಕೆಲ್ಲಾ ಮಣಿಯುವುದಿಲ್ಲ ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ಪ್ರತಿಜ್ಞೆ ಮಾಡಿದ್ದಾರೆ.
ಡಾಲರ್ ಎದುರು ಕುಸಿತ ಕಾಣುತ್ತಿರುವ ಕರೆನ್ಸಿ, ಆರ್ಥಿಕ ಬಿಕ್ಕಟ್ಟಿನ ಬಳಿಕ ರವಿವಾರ ಇರಾನ್ ನಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಈ ವೇಳೆ 10ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಹಲವರನ್ನು ಬಂಧಿಸಲಾಗಿದೆ. ಇದರಿಂದಾಗಿ ಪ್ರತಿಭಟನಾಕಾರರ ನೆರವಿಗೆ ಬರುವುದಾಗಿ ಟ್ರಂಪ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅಯತೊಲ್ಲಾ ಅಲಿ ಖಾಮಿನೈ, "ಇಸ್ಲಾಮಿಕ್ ಗಣರಾಜ್ಯವು ಶತ್ರುಗಳಿಗೆ ಮಣಿಯುವುದಿಲ್ಲ. ಗಲಭೆಕೋರರನ್ನು ಅವರ ಸ್ಥಾನದಲ್ಲಿ ಇರಿಸಬೇಕು. ನಾವು ಪ್ರತಿಭಟನಾಕಾರರೊಂದಿಗೆ ಮಾತನಾಡುತ್ತೇವೆ. ಆದರೆ, ಗಲಭೆಕೋರರೊಂದಿಗೆ ಮಾತನಾಡುವುದು ನಿಷ್ಪ್ರಯೋಜಕವಾಗಿದೆ" ಎಂದು ಹೇಳಿದ್ದಾರೆ.
ಇರಾನ್ನ ಪಶ್ಚಿಮ ಪ್ರಾಂತ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿ ಹಲವರು ಮೃತಪಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







