ಖೈಬರ್ ಪಖ್ತೂಂಕ್ವಾ ಮಸೀದಿ ಸ್ಫೋಟಿಸಿದ ಪಾಕ್ ಸೇನೆ: ವರದಿ

PC : news18.com
ಪೇಷಾವರ, ಆ.21: ಖೈಬರ್ ಪಖ್ತೂಂಕ್ವಾ ಪ್ರಾಂತದ ಬಜೌರ್ ಜಿಲ್ಲೆಯಲ್ಲಿ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗುಂಪು ಬಳಸುತ್ತಿದ್ದ ಮಸೀದಿಯನ್ನು ಪಾಕಿಸ್ತಾನ್ ಭದ್ರತಾ ಪಡೆಗಳು ಗುರುವಾರ ಸ್ಫೋಟಿಸಿದ್ದು ಟಿಟಿಪಿಯೊಂದಿಗೆ ಸಂಯೋಜಿತವಾದ ಕನಿಷ್ಠ 30 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.
ಟಿಟಿಪಿ ಹೋರಾಟಗಾರರು ಆಕ್ರಮಿಸಿಕೊಂಡಿದ್ದ ಮಸೀದಿಯೊಳಗೆ ಅಡಗುದಾಣವನ್ನು ಗುರಿಯಾಗಿಸಿ ನಡೆದ ಕಾರ್ಯಾಚರಣೆಯಲ್ಲಿ ಕನಿಷ್ಠ 30 ಉಗ್ರರು ಹತರಾಗಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಕಾರ್ಯಾಚರಣೆಯು ಗಡಿಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಪ್ರಯತ್ನದ ಭಾಗವಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನ ಗಡಿಭಾಗದ ಸನಿಹದಲ್ಲಿರುವ ಬಜೌರ್ ಪ್ರದೇಶವು ದೀರ್ಘಾವಧಿಯಿಂದ ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ಗೆ ಸಂಯೋಜಿತವಾಗಿರುವ ಗುಂಪುಗಳ ಭದ್ರಕೋಟೆ ಎನಿಸಿದ್ದು ಇಲ್ಲಿ ಕಳೆದ ಕೆಲ ವರ್ಷಗಳಿಂದ ಉಗ್ರಗಾಮಿಗಳು ಹಾಗೂ ಮಿಲಿಟರಿ ನಡುವೆ ಘರ್ಷಣೆ ನಡೆದಿದೆ. ಖೈಬರ್ ಪಖ್ತೂಂಕ್ವಾದ ಮಸೀದಿಯಲ್ಲಿ ನಡೆದ ಕಾರ್ಯಾಚರಣೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿದ್ದು ಉಪಗ್ರಹಗಳಿಂದ ಲಭಿಸಿದ ವೀಡಿಯೊಗಳು ಹಾಗೂ ಸಾರ್ವಜನಿಕ ಮೂಲಗಳನ್ನು ಆಧರಿಸಿ ವರದಿ ಮಾಡಿರುವುದಾಗಿ ಮಾಹಿತಿ ನೀಡಿವೆ.
ಪಾಕಿಸ್ತಾನದ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶವಾದ ಇನಾಯತ್ ಕಲ್ಲೆ ಎಂಬ ಪ್ರದೇಶದಲ್ಲಿ ಹೊಗೆ ಆಗಸಕ್ಕೆ ವ್ಯಾಪಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಾರದ ಆರಂಭದಲ್ಲಿ ಇದೇ ಪ್ರದೇಶದಲ್ಲಿ ಪಾಕಿಸ್ತಾನ್ ಸೇನೆಯ ವಾಹನಗಳ ಸಾಲನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಗೆ ಸಂಬಂಧಿಸಿದ ಕಾರ್ಯಾಚರಣೆ ಇದಾಗಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.







