ಪಾಕಿಸ್ತಾನ ಸೇನೆಯಿಂದ ಬಲೂಚ್ ಯುವಕರ ಹತ್ಯೆ: ಆರೋಪ

ಕ್ವೆಟ: ಪಾಕಿಸ್ತಾನದ ಸೇನೆ ಬಲೂಚಿಸ್ತಾನದ ಮೂವರು ಯುವಕರನ್ನು ಅಪಹರಿಸಿ, ವಾಹನದಲ್ಲಿ ಕುಳ್ಳಿರಿಸಿದ ಬಳಿಕ ವಾಹನವನ್ನು ಸ್ಫೋಟಿಸಿ ಹತ್ಯೆ ಮಾಡಿದೆ ಎಂದು `ಬಲೂಚ್ ನ್ಯಾಷನಲ್ ಮೂವ್ಮೆಂಟ್(ಬಿಎನ್ಎಮ್) ಮಂಗಳವಾರ ಆರೋಪಿಸಿದೆ.
`ಪಾಕಿಸ್ತಾನದಿಂದ ಸ್ವತಂತ್ರಗೊಳ್ಳಲು ಬಯಸುತ್ತಿರುವ ಬಲೂಚಿಸ್ತಾನದ ವಿರುದ್ಧ ಪಾಕಿಸ್ತಾನವು ದೌರ್ಜನ್ಯ ನಡೆಸುತ್ತಿದೆ. ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆ ಮತ್ತು ಬಲವಂತದ ನಾಪತ್ತೆ ಪ್ರಕರಣದ ಪ್ರಾಥಮಿಕ ಅಪರಾಧಿಯಾಗಿದೆ' ಎಂದು ಬಿಎನ್ಎಂ ನ ವಿದೇಶ ವ್ಯವಹಾರ ಸಮಿತಿಯ ಸದಸ್ಯ ಹಕೀಮ್ ಬಲೂಚ್ ಆರೋಪಿಸಿದ್ದಾರೆ. ಬಿಎನ್ಎಂ ಒಂದು ರಾಜಕೀಯ ಸಂಘಟನೆಯಾಗಿದ್ದು ಇದು ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ, ಸ್ವತಂತ್ರ ಮತ್ತು ಸಾರ್ವಭೌಮ ಬಲೂಚಿಸ್ತಾನ ದೇಶವನ್ನು ಪ್ರತಿಪಾದಿಸುತ್ತಿದೆ.
ಆದರೆ ಸಂಘಟನೆಯ ಸದಸ್ಯರನ್ನು ಭಯೋತ್ಪಾದಕರು ಎಂದು ಹೆಸರಿಸುವ ಪಾಕಿಸ್ತಾನ ಸೇನೆ ಅವರನ್ನು ಅಕ್ರಮವಾಗಿ ಬಂಧಿಸಿ ಕೊಲ್ಲುತ್ತಿದೆ. ಸಂಘಟನೆಯ ಮೂವರು ಸದಸ್ಯರನ್ನು ಆಗಸ್ಟ್ ನಲ್ಲಿ ಪಾಕ್ ಸೇನೆ ಅಪಹರಿಸಿದ್ದು ಈ ವಿಷಯವನ್ನು ಮಾನವ ಹಕ್ಕುಗಳ ಸಂಸ್ಥೆಯ ಗಮನಕ್ಕೆ ತರಲಾಗಿದೆ ಎಂದವರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.





