ಲಾಹೋರ್: ವಾಯುಮಾಲಿನ್ಯ ಹೆಚ್ಚಳ
ರಾತ್ರಿ 10ರೊಳಗೆ ಬಾಗಿಲು ಮುಚ್ಚಲು ವ್ಯಾಪಾರ ಸಂಸ್ಥೆಗಳಿಗೆ ಸೂಚನೆ

Photo- PTI
ಲಾಹೋರ್: ಲಾಹೋರ್ ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ಕ್ರಮವಾಗಿ ಪ್ರತೀ ದಿನ ರಾತ್ರಿ 10 ಗಂಟೆಯೊಳಗೆ ಬಾಗಿಲು ಮುಚ್ಚುವಂತೆ ವ್ಯಾಪಾರ, ವ್ಯವಹಾರ ಸಂಸ್ಥೆಗಳಿಗೆ ಲಾಹೋರ್ ಹೈಕೋರ್ಟ್ ಆದೇಶಿಸಿರುವುದಾಗಿ ಎಆರ್ಐ ಸುದ್ಧಿಸಂಸ್ಥೆ ವರದಿ ಮಾಡಿದೆ.
ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ ಮತ್ತೊಮ್ಮೆ ವಿಶ್ವದ ಅತ್ಯಂತ ಕಲುಷಿತ ನಗರ ಎಂದು ಹೆಸರಿಸಲ್ಪಟ್ಟಿದೆ. ವಾಯುಮಾಲಿನ್ಯ ಮತ್ತಷ್ಟು ಹದಗೆಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲಾ ಮಾರುಕಟ್ಟೆ, ಅಂಗಡಿ, ಉಪಾಹಾರ ಗೃಹ ಹಾಗೂ ಇತರ ಸಂಸ್ಥೆಗಳನ್ನು ರಾತ್ರಿ 10ರೊಳಗೆ ಮುಚ್ಚುವಂತೆ ಸೂಚಿಸಿದೆ.
ಅಲ್ಲದೆ ಮುಂದಿನ ಆದೇಶದವರೆಗೆ ಎಲ್ಲಾ ಬ್ಯಾಂಕ್ಗಳು ಹಾಗೂ ಕಚೇರಿಗಳ ಸಿಬ್ಬಂದಿ ವಾರಕ್ಕೆ 2 ದಿನ ಮನೆಯಲ್ಲೇ ಕೆಲಸ ನಿರ್ವಹಿಸಬೇಕು. ನ್ಯಾಯಾಲಯದ ನಿರ್ದೇಶನ ಜಾರಿಯಾಗುವಂತೆ ಪಂಜಾಬ್ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಲಾಹೋರ್ ಪೊಲೀಸ್ ಮುಖ್ಯಸ್ಥರು ನೋಡಿಕೊಳ್ಳಬೇಕೆಂದು ಸೂಚನೆ ನೀಡಿದೆ.





