ತಾಂಝಾನಿಯಾದಲ್ಲಿ ಭೂಕುಸಿತ ; ಕನಿಷ್ಟ 47 ಮಂದಿ ಮೃತ್ಯು

Photo: Twitter
ದರೆಸ್ಸಲಾಮ್: ಉತ್ತರ ತಾಂಝಾನಿಯಾದಲ್ಲಿ ಶನಿವಾರದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಹಲವೆಡೆ ಪ್ರವಾಹ ಉಂಟಾಗಿದ್ದು ಭೂಕುಸಿತದಿಂದ ಕನಿಷ್ಟ 47 ಮಂದಿ ಮೃತಪಟ್ಟು ಇತರ 85 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕತೆಶ್ ನಗರದಲ್ಲಿ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಈ ಪ್ರದೇಶದ ಹಲವು ರಸ್ತೆಗಳು ಮಣ್ಣು, ಕೆಸರು ನೀರು ಮತ್ತು ನೆಲಕ್ಕೆ ಉರುಳಿದ ಮರ, ಕಲ್ಲುಗಳಿಂದ ಮುಚ್ಚಿಹೋಗಿದೆ ಎಂದು ಜಿಲ್ಲಾಧಿಕಾರಿ ಜ್ಯಾನೆಟ್ ಮಯಾಂಜಾ ಹೇಳಿದ್ದಾರೆ. ಜಲಾವೃತಗೊಂಡಿರುವ ಮನೆಗಳು ಹಾಗೂ ದಟ್ಟವಾದ ಕೆಸರಿನಲ್ಲಿ ಹೂತುಹೋಗಿರುವ ವಾಹನಗಳ ಫೋಟೋವನ್ನು ಸ್ಥಳೀಯ ಟಿವಿ ವಾಹಿನಿಗಳು ಪ್ರಸಾರ ಮಾಡಿವೆ.
ದುಬೈಯಲ್ಲಿ ನಡೆಯುತ್ತಿರುವ ಸಿಒಪಿ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಅಧ್ಯಕ್ಷೆ ಸಮಿಯಾ ಹಸನ್ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದು ಜನರನ್ನು ರಕ್ಷಿಸುವ ಕಾರ್ಯಾಚರಣೆಗೆ ಹೆಚ್ಚುವರಿ ಪಡೆಯನ್ನು ರವಾನಿಸುವಂತೆ ಸೂಚಿಸಿದ್ದಾರೆ.
ಭೀಕರ ಬರಗಾಲದ ಪ್ರಹಾರಕ್ಕೆ ತತ್ತರಿಸಿದ್ದ ಪೂರ್ವ ಆಫ್ರಿಕಾದ ದೇಶಗಳು ಈಗ ಎಲ್ನಿನೊ ಹವಾಮಾನ ವಿದ್ಯಮಾನದಿಂದಾಗಿ ಹಲವು ವಾರಗಳಿಂದ ನಿರಂತರ ಸುರಿಯುತ್ತಿರುವ ಭಾರೀ ಮಳೆಯಿಂದ ನಲುಗಿವೆ. ನಿರಂತರ ಮಳೆಯಿಂದಾಗಿ ಸೊಮಾಲಿಯಾದಲ್ಲಿ ಕನಿಷ್ಟ 100 ಮಂದಿ ಸಾವನ್ನಪ್ಪಿದ್ದು ದಶಲಕ್ಷಕ್ಕೂ ಅಧಿಕ ಮಂದಿ ಸ್ಥಳಾಂತರಗೊಂಡಿದ್ದಾರೆ. ಮೇ ತಿಂಗಳಿನಲ್ಲಿ ರವಾಂಡ ದೇಶದಲ್ಲಿ ಸುರಿದ ಮಳೆ, ವಿನಾಶಕಾರಿ ಪ್ರವಾಹ ಹಾಗೂ ಭೂಕುಸಿತದಿಂದ ಸುಮಾರು 130 ಮಂದಿ ಮೃತಪಟ್ಟಿದ್ದರು.







