ಸ್ಪೇನ್ ಹಾಗೂ ಪೋರ್ಚುಗಲ್ ನ ಬಹುತೇಕ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ; ವಿಮಾನ ಕಾರ್ಯಾಚರಣೆ ವಿಳಂಬ

ಸಾಂದರ್ಭಿಕ ಚಿತ್ರ | PC : freepik.com
ಮ್ಯಾಡ್ರಿಡ್/ಲಿಸ್ಬಾನ್: ಸೋಮವಾರ ಸ್ಪೇನ್ ಹಾಗೂ ಪೋರ್ಚುಗಲ್ ನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಸಂಭವಿಸಿದ್ದು, ಇದರಿಂದಾಗಿ ಸಾರ್ವಜನಿಕ ಸಾರಿಗೆ ಅಸ್ತವ್ಯಸ್ತಗೊಂಡಿದೆ. ಈ ವಿದ್ಯುತ್ ವ್ಯತ್ಯಯದಿಂದಾಗಿ ರಸ್ತೆಗಳಲ್ಲಿ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಏರ್ಪಟ್ಟಿದ್ದು, ವಿಮಾನ ಯಾನ ಸಂಸ್ಥೆಗಳ ವೈಮಾನಿಕ ಕಾರ್ಯಾಚರಣೆಗಳು ವಿಳಂಬಗೊಂಡಿವೆ. ತಾಂತ್ರಿಕ ಕಾರಣಗಳಿಂದಾಗಿ ವಿಫಲಗೊಂಡಿರುವ ವಿದ್ಯುತ್ ಪೂರೈಕೆ ಗ್ರಿಡ್ ಗಳನ್ನು ಮರುಸ್ಥಾಪಿಸಲು ವಿದ್ಯುತ್ ಸರಬರಾಜು ಸಂಸ್ಥೆಗಳು ಹರಸಾಹಸ ನಡೆಸುತ್ತಿವೆ ಎಂದು ವರದಿಯಾಗಿದೆ.
ವಿದ್ಯುತ್ ಸರಬರಾಜು ನಿಲುಗಡೆಗೊಂಡು ಗಂಟೆಗಳು ಕಳೆದರೂ, ಅದಕ್ಕೆ ಕಾರಣವೇನೆಂದು ವಿವರಿಸಲು ಪ್ರಾಧಿಕಾರಗಳಿಗೆ ಸಾಧ್ಯವಾಗಿಲ್ಲ. ವಿದ್ಯುತ್ ಪೂರೈಕೆ ಗ್ರಿಡ್ ಗಳ ಮೇಲೆ ಸೈಬರ್ ದಾಳಿ ನಡೆದಿರಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಹಾಗೂ ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಸ್ಪೇನ್ ನಲ್ಲಿ ಬಿಕ್ಕಟ್ಟು ನಿರ್ವಹಣೆ ಸಮಿತಿಯನ್ನು ರಚಿಸಲಾಗಿದೆ ಎಂದು ವಿಶ್ವಾಿಸಾರ್ಹ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಈಶಾನ್ಯ ಸ್ಪೇನ್ ನೊಂದಿಗೆ ಗಡಿ ಹಂಚಿಕೊಂಡಿರುವ ಫ್ರಾನ್ಸ್ ನ ಒಂದು ಭಾಗ ಕೂಡಾ ಈ ವಿದ್ಯುತ್ ವ್ಯತ್ಯಯದಿಂದ ಕೊಂಚ ಕಾಲ ತೊಂದರೆಗೀಡಾಗಿದ್ದು, ಇದರ ಬೆನ್ನಿಗೇ, ವಿದ್ಯುತ್ ವ್ಯತ್ಯಯದ ಕುರಿತು ಸ್ಪೇನ್ ಹಾಗೂ ಪೋರ್ಚುಗಲ್ ಸರಕಾರಗಳು ಸಚಿವ ಸಂಪುಟ ಸಭೆಗಳನ್ನು ನಡೆಸಿವೆ.
ಫ್ರಾನ್ಸ್ ನ ಒಂದು ಭಾಗದಲ್ಲೂ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿರುವ ಈ ವಿದ್ಯುತ್ ಕಡಿತವನ್ನು ಪೋರ್ಚುಗಲ್ ನ ವಿದ್ಯುತ್ ಸರಬರಾಜು ಸಂಸ್ಥೆ REN ದೃಢಪಡಿಸಿದೆ. ಮತ್ತೊಂದೆಡೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಪ್ರಾಂತೀಯ ವಿದ್ಯುತ್ ಕಂಪನಿಗಳೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಸ್ಪೇನ್ ನ ವಿದ್ಯುತ್ ಸರಬರಾಜು ಸಂಸ್ಥೆ Red Electrica ಹೇಳಿದೆ.







