ವೆನೆಝುವೆಲಾ ಜತೆ ‘ವಿಶ್ವದ ಇತಿಹಾಸದಲ್ಲೇ ಅತಿ ದೊಡ್ಡ ತೈಲ ಒಪ್ಪಂದ’: ಟ್ರಂಪ್ ಘೋಷಣೆ

ವಾಷಿಂಗ್ಟನ್, ಆ. 29: ‘ವಿಶ್ವದ ಇತಿಹಾಸದಲ್ಲಿಯೇ ಅತಿ ದೊಡ್ಡ ತೈಲ ಒಪ್ಪಂದ’ವೊಂದನ್ನು ವೆನೆಝುವೆಲಾ ಜತೆ ಅಮೆರಿಕ ಮಾಡಿಕೊಂಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಘೋಷಿಸಿದ್ದಾರೆ.
ವೆನೆಝುವೆಲಾದ 65 ಬಿಲಿಯನ್ ಬ್ಯಾರೆಲ್ ಗಳಷ್ಟು ತೈಲ ನಿಕ್ಷೇಪಗಳ ನಿಯಂತ್ರಣ ಪಡೆಯಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಝುವೆಲಾದ ಮಧ್ಯಂತರ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಒಪ್ಪಂದದ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
‘ವಿಶ್ವ ಇತಿಹಾಸದಲ್ಲಿಯೇ ಅತಿ ದೊಡ್ಡ ತೈಲ ಒಪ್ಪಂದದ ಕುರಿತು ಅಮೆರಿಕವು ವೆನೆಝುವೆಲಾ ಜತೆ ಇದೀಗಷ್ಟೇ ಒಪ್ಪಂದ ಮಾಡಿಕೊಂಡಿದೆ’ ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಅವರ ನಿರ್ದೇಶನದ ಮೇರೆಗೆ ಅಮೆರಿಕದ ಸೇನೆಯು ವೆನೆಝುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ, ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪಗಳನ್ನು ಎದುರಿಸಲು ಅಮೆರಿಕಕ್ಕೆ ಕರೆದೊಯ್ಯುವ ಕಾರ್ಯಾಚರಣೆ ನಡೆಸಿದ ಸುಮಾರು ಒಂಭತ್ತು ತಿಂಗಳ ಬಳಿಕ ಈ ಒಪ್ಪಂದದ ಘೋಷಣೆ ಹೊರಬಿದ್ದಿದೆ.
ಇಂಧನ ಬೆಲೆ ಏರಿಕೆ
ಇರಾನ್‌ನಲ್ಲಿನ ಯುದ್ಧವು ಶುಕ್ರವಾರ ಆರು ತಿಂಗಳ ಗಡಿ ತಲುಪಿದ್ದು, ಯಾವುದೇ ಅಂತಿಮ ಪರಿಹಾರ ಕಂಡುಬಂದಿಲ್ಲ. ಇದರ ನಡುವೆ ಅಮೆರಿಕದಲ್ಲಿ ಏರುತ್ತಿರುವ ಇಂಧನ ಬೆಲೆಗಳನ್ನು ನಿಯಂತ್ರಿಸುವಂತೆ ಟ್ರಂಪ್ ಆಡಳಿತದ ಮೇಲೆ ಒತ್ತಡ ಹೆಚ್ಚಿದೆ.
2026ರ ಆರಂಭದಿಂದ ಅಮೆರಿಕದ ತುರ್ತು ಬಳಕೆಗಾಗಿ ಇರಿಸಿರುವ ತೈಲ ಸಂಗ್ರಹದಲ್ಲಿ 100 ಮಿಲಿಯನ್ ಬ್ಯಾರೆಲ್ ಗೂ ಹೆಚ್ಚು ಇಳಿಕೆಯಾಗಿದೆ. ಆಗಸ್ಟ್ ಆರಂಭದ ವೇಳೆಗೆ ಈ ಸಂಗ್ರಹದಲ್ಲಿ 300 ಮಿಲಿಯನ್ ಬ್ಯಾರೆಲ್ ಗಿಂತ ಕಡಿಮೆ ತೈಲ ಮಾತ್ರ ಉಳಿದಿತ್ತು.
ಇರಾನ್ ವಿರುದ್ಧದ ಅಮೆರಿಕ–ಇಸ್ರೇಲ್ ಯುದ್ಧದಿಂದ ಹಾರ್ಮುಝ್ ಜಲಸಂಧಿ ಮೂಲಕ ಸಾಗುವ ಗಲ್ಫ್ ಪ್ರದೇಶದ ತೈಲದ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಸಂಘರ್ಷಕ್ಕೂ ಮುನ್ನ ಈ ಮಾರ್ಗದ ಮೂಲಕ ವಿಶ್ವದ ಪೆಟ್ರೋಲಿಯಂ ಪೂರೈಕೆಯ ಸುಮಾರು ಶೇ. 20ರಷ್ಟು ಸಾಗುತ್ತಿತ್ತು.
ಅಮೆರಿಕನ್ ಆಟೊಮೊಬೈಲ್ ಅಸೋಸಿಯೇಷನ್ (AAA) ಪ್ರಕಾರ, ಶುಕ್ರವಾರ ಅಮೆರಿಕದಲ್ಲಿ ಪೆಟ್ರೋಲ್ ನ ಸರಾಸರಿ ಬೆಲೆ ಪ್ರತಿ ಗ್ಯಾಲನ್‌ಗೆ 4.09 ಡಾಲರ್ ಇತ್ತು. ಕಳೆದ ವರ್ಷದ ಇದೇ ಅವಧಿಯಲ್ಲಿ ಸರಾಸರಿ ಬೆಲೆ 3.21 ಡಾಲರ್ ಆಗಿತ್ತು.
ಖಾಸಗಿ ಹೂಡಿಕೆ
ವೆನೆಝುವೆಲಾ ಜತೆಗಿನ ಒಪ್ಪಂದವು ಖಾಸಗಿ ಸಹಭಾಗಿತ್ವದ ಭಾಗವಾಗಿದೆ ಎಂದು ಟ್ರಂಪ್ ಶುಕ್ರವಾರ ಸಂಜೆ ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಸೂಚಿಸಿದ್ದಾರೆ. ಆದರೆ ಒಪ್ಪಂದದಲ್ಲಿ ಭಾಗಿಯಾಗಿರುವ ಖಾಸಗಿ ವಲಯದ ಪಾಲುದಾರರು ಯಾರು ಎಂಬ ಬಗ್ಗೆ ಶ್ವೇತಭವನ ತಕ್ಷಣ ಮಾಹಿತಿ ನೀಡಿಲ್ಲ. ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ವಿವರಗಳನ್ನೂ ನೀಡಲಾಗಿಲ್ಲ.
ಅಮೆರಿಕದ ದೊಡ್ಡ ತೈಲ ಕಂಪನಿಗಳು ವೆನೆಝುವೆಲಾದಲ್ಲಿ ಮತ್ತೆ ಹೂಡಿಕೆ ಮಾಡಲು ಮುಂದಾಗುವುದು ಸುಲಭವಲ್ಲ. ಏಕೆಂದರೆ ಹಲವು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಅಲ್ಲಿನ ತೈಲ ಉತ್ಪಾದನಾ ವ್ಯವಸ್ಥೆ ಹದಗೆಟ್ಟಿದೆ.
ಮಡುರೊ ಪದಚ್ಯುತಗೊಂಡ ಕೆಲವೇ ದಿನಗಳ ಬಳಿಕ ಟ್ರಂಪ್ ಶ್ವೇತಭವನದಲ್ಲಿ ತೈಲ ಕಂಪೆನಿಗಳ ಕಾರ್ಯನಿರ್ವಾಹಕರನ್ನು ಸಭೆ ಸೇರಿಸಿ ವೆನೆಝುವೆಲಾಕ್ಕೆ ಮರಳುವಂತೆ ಕರೆ ನೀಡಿದ್ದರು. ಕಾರ್ಯನಿರ್ವಾಹಕರು ಅಲ್ಲಿನ ಅವಕಾಶಗಳ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರೂ, ದೇಶದಲ್ಲಿ ತಮ್ಮ ಹಿಂದಿನ ಅನುಭವವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದರು.
ಅಮೆರಿಕದ ಅತಿದೊಡ್ಡ ತೈಲ ಕಂಪೆನಿಯಾದ ಎಕ್ಸಾನ್ ಮೊಬಿಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡ್ಯಾರೆನ್ ವುಡ್ಸ್, ಆಗ ವೆನೆಝುವೆಲಾವನ್ನು ‘ಹೂಡಿಕೆ ಮಾಡಲು ಯೋಗ್ಯವಲ್ಲದ’ ದೇಶವೆಂದು ಪರಿಗಣಿಸಿದ್ದಾಗಿ ಹೇಳಿದ್ದರು.
ಆದರೆ ತಮ್ಮ ಆಡಳಿತವು ವೆನೆಝುವೆಲಾಕ್ಕೆ ಸ್ವಲ್ಪ ಸ್ಥಿರತೆ ತಂದಿದೆ ಎಂದು ಟ್ರಂಪ್ ಹೇಳಿದ್ದಾರೆ.
ದಶಕಗಳ ಹಿಂದೆ ವೆನೆಝುವೆಲಾದ ಮಾಜಿ ಅಧ್ಯಕ್ಷ ಹ್ಯೂಗೋ ಚಾವೆಜ್ ಅಮೆರಿಕದ ತೈಲ ಕಂಪೆನಿಗಳ ಒಡೆತನದಲ್ಲಿದ್ದ ಆಸ್ತಿಗಳನ್ನೂ ಒಳಗೊಂಡಂತೆ ಅಮೆರಿಕದ ತೈಲವನ್ನು ‘ಕದ್ದಿದ್ದಾರೆ’ ಎಂದು ಟ್ರಂಪ್ ಆರೋಪಿಸಿದ್ದಾರೆ.
ಡೆಲ್ಸಿ ರೊಡ್ರಿಗಸ್ ಅಧಿಕಾರ ವಹಿಸಿಕೊಂಡ ನಂತರದ ಮೊದಲ ಪ್ರಮುಖ ಕ್ರಮಗಳಲ್ಲಿ ಒಂದಾಗಿ, ವೆನೆಝುವೆಲಾದ ತೈಲ ಕ್ಷೇತ್ರದಲ್ಲಿ ಖಾಸಗಿ ಕಂಪೆನಿಗಳು ಹೂಡಿಕೆ ಮಾಡಲು ಅವಕಾಶ ನೀಡುವ ಕಾನೂನಿಗೆ ಸಹಿ ಹಾಕಿದ್ದಾರೆ. ಇದರಿಂದ ಎರಡು ದಶಕಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಸ್ವಯಂಘೋಷಿತ ಸಮಾಜವಾದಿ ಚಳವಳಿಯ ಪ್ರಮುಖ ನೀತಿಯಲ್ಲಿ ಬದಲಾವಣೆಯಾಗಿದೆ.
ಈ ಒಪ್ಪಂದದಿಂದ ವೆನೆಝುವೆಲಾಕ್ಕೆ 100 ಬಿಲಿಯನ್ ಡಾಲರ್ ಗಳಷ್ಟು ಖಾಸಗಿ ಹೂಡಿಕೆ ಹರಿದುಬರಲಿದೆ. ಇದರಿಂದ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಇಳಿಯಲಿದೆ ಎಂದು ರುಬಿಯೊ ‘ಎಕ್ಸ್’ನಲ್ಲಿ ಹೇಳಿದ್ದಾರೆ.
‘ಈ ಒಪ್ಪಂದವು ಅಮೆರಿಕ ಮತ್ತು ವೆನೆಝುವೆಲಾದ ಜನರಿಗೆ ದೊಡ್ಡ ಗೆಲುವು’ ಎಂದು ರುಬಿಯೊ ಹೇಳಿದ್ದಾರೆ.
303 ಬಿಲಿಯನ್ ಬ್ಯಾರೆಲ್ ನಿಕ್ಷೇಪ
ವೆನೆಝುವೆಲಾ ವಿಶ್ವದಲ್ಲೇ ಅತಿ ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಅಮೆರಿಕದ ಎನರ್ಜಿ ಇನ್‌ಫರ್ಮೇಷನ್ ಅಡ್ಮಿನಿಸ್ಟ್ರೇಷನ್ (EIA) ಪ್ರಕಾರ, ವೆನೆಝುವೆಲಾದಲ್ಲಿ ಸುಮಾರು 303 ಬಿಲಿಯನ್ ಬ್ಯಾರೆಲ್‌ಗಳಷ್ಟು ಕಚ್ಚಾ ತೈಲ ನಿಕ್ಷೇಪವಿದೆ. ಇದು ವಿಶ್ವದಲ್ಲಿರುವ ಒಟ್ಟು ತೈಲ ನಿಕ್ಷೇಪದ ಸುಮಾರು ಶೇ. 17ರಷ್ಟಾಗಿದೆ.
ವಿಶ್ವದ ಹಲವು ದೇಶಗಳಲ್ಲಿ ಇನ್ನೂ ತೈಲ ನಿಕ್ಷೇಪಗಳನ್ನು ಪತ್ತೆಹಚ್ಚಬೇಕಿದೆ. ಆದರೆ ವೆನೆಝುವೆಲಾದಲ್ಲಿರುವ ಬಹುತೇಕ ತೈಲ ನಿಕ್ಷೇಪಗಳು ಈಗಾಗಲೇ ಪತ್ತೆಯಾಗಿವೆ ಎಂದು ತಜ್ಞರು ಹೇಳಿದ್ದಾರೆ. ಆದರೂ ಅಲ್ಲಿನ ತೈಲ ಉತ್ಪಾದನಾ ಮೂಲಸೌಕರ್ಯ ಹದಗೆಟ್ಟಿರುವುದರಿಂದ, ವಿಶ್ವದ ಒಟ್ಟು ತೈಲ ಉತ್ಪಾದನೆಯಲ್ಲಿ ವೆನೆಝುವೆಲಾದ ಪಾಲು ಕೇವಲ ಶೇ. 1ರಷ್ಟಿದೆ.






