ವಿದೇಶಿ ವಿದ್ಯಾರ್ಥಿಗಳು, ಪತ್ರಕರ್ತರಿಗೆ ಹೊಸ ವೀಸಾ ಮಿತಿ; ಟ್ರಂಪ್ ಆಡಳಿತದ ನಿಯಮಕ್ಕೆ ಅಮೆರಿಕ ನ್ಯಾಯಾಲಯ ತಡೆ

Photo: AI-Generated
ವಾಷಿಂಗ್ಟನ್: ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಉಳಿಯುವ ಅವಧಿಗೆ ಮಿತಿ ವಿಧಿಸಿದ್ದ ಟ್ರಂಪ್ ಆಡಳಿತದ ಹೊಸ ವೀಸಾ ನಿಯಮ ಜಾರಿಗೆ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ.
ಮ್ಯಾಸಚೂಸೆಟ್ಸ್ ಜಿಲ್ಲಾ ನ್ಯಾಯಾಧೀಶ ಎಫ್. ಡೆನ್ನಿಸ್ ಸೇಲರ್ IV ಅವರು ಸೋಮವಾರ ಈ ಆದೇಶ ಹೊರಡಿಸಿದ್ದಾರೆ. ಹೊಸ ನಿಯಮ ಮಂಗಳವಾರದಿಂದ ಜಾರಿಗೆ ಬರಬೇಕಿತ್ತು. ಆದರೆ, ಜಾರಿಗೆ ಒಂದು ದಿನ ಮುನ್ನವೇ ನ್ಯಾಯಾಲಯ ತಡೆ ನೀಡಿದೆ. ಇದರಿಂದ ಭಾರತದ ಅನೇಕ ವಿದ್ಯಾರ್ಥಿಗಳು ಸೇರಿದಂತೆ ಅಮೆರಿಕದಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ನಿರಾಳತೆ ದೊರೆತಿದೆ.
ಹೊಸ ನಿಯಮದಲ್ಲಿ ಏನಿತ್ತು?
ಟ್ರಂಪ್ ಆಡಳಿತ ಜುಲೈನಲ್ಲಿ ಅಂತಿಮಗೊಳಿಸಿದ್ದ ನಿಯಮದ ಪ್ರಕಾರ, ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ವೀಸಾದಲ್ಲಿ ಅಮೆರಿಕಕ್ಕೆ ಬರುವವರಿಗೆ ನಾಲ್ಕು ವರ್ಷಗಳ ಗರಿಷ್ಠ ಅವಧಿ ನಿಗದಿಪಡಿಸಲಾಗಿತ್ತು. ವಿದೇಶಿ ಪತ್ರಕರ್ತರಿಗೆ ನೀಡುವ ವೀಸಾಗಳಿಗೆ 240 ದಿನಗಳ ಮಿತಿ ಇತ್ತು. ಆದರೆ, ಚೀನಾದ ಪತ್ರಕರ್ತರಿಗೆ ಈ ಮಿತಿ 90 ದಿನಗಳು ಎಂದು ನಿಗದಿಪಡಿಸಲಾಗಿತ್ತು.
ವೀಸಾ ಅವಧಿ ಮುಗಿದ ಬಳಿಕ ಅಮೆರಿಕದಲ್ಲಿ ಉಳಿಯಬೇಕಾದ ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಅವಧಿ ವಿಸ್ತರಣೆಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಆದರೆ, ಅರ್ಜಿಯನ್ನು ಒಪ್ಪಬೇಕೇ ಅಥವಾ ತಿರಸ್ಕರಿಸಬೇಕೇ ಎಂಬುದು ‘ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ’ (DHS) ಅಧಿಕಾರಿಗಳ ನಿರ್ಧಾರಕ್ಕೆ ಬಿಟ್ಟಿತ್ತು. ಅರ್ಜಿ ತಿರಸ್ಕೃತವಾದರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರಲಿಲ್ಲ.
ಈ ನಿಯಮ ದೇಶದ ರಕ್ಷಣೆಗಾಗಿ ಅಗತ್ಯ ಎಂದು ಅಮೆರಿಕ ಸರಕಾರ ಹೇಳಿತ್ತು. ವೀಸಾ ವ್ಯವಸ್ಥೆಯಲ್ಲಿನ ವಂಚನೆಯನ್ನು ತಡೆಯಲು ಮತ್ತು ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿ ಉಳಿದುಕೊಳ್ಳುವವರನ್ನು ನಿಯಂತ್ರಿಸಲು ಈ ಮಿತಿ ಅಗತ್ಯ ಎಂದು DHS ಹೇಳಿತ್ತು.
ಆದರೆ, ನ್ಯಾಯಾಧೀಶ ಸೇಲರ್ ಈ ವಾದವನ್ನು ಒಪ್ಪಲಿಲ್ಲ. ಹೊಸ ನಿಯಮ ಜಾರಿಯಾದರೆ ಅಮೆರಿಕದ ಆರ್ಥಿಕತೆ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಗೆ ‘ವಿನಾಶಕಾರಿ’ ಹಾನಿಯಾಗಬಹುದು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿ ವೀಸಾಗೆ ನಾಲ್ಕು ವರ್ಷಗಳ ಮಿತಿ ನಿಗದಿಪಡಿಸಿರುವುದನ್ನು ಹಾರ್ವರ್ಡ್ ಅಧ್ಯಕ್ಷ ಅಲನ್ ಎಂ. ಗಾರ್ಬರ್ ಪ್ರಶ್ನಿಸಿದ್ದರು.
ಸಾಮಾನ್ಯ ಪಿಎಚ್ಡಿ ಕಾರ್ಯಕ್ರಮ ಪೂರ್ಣಗೊಳ್ಳಲು ಕನಿಷ್ಠ ಆರು ವರ್ಷಗಳಾದರೂ ಬೇಕಾಗುತ್ತದೆ. ಹೀಗಾಗಿ ವೀಸಾ ಅವಧಿಯನ್ನು ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಿರುವುದು ವಿಚಿತ್ರ ಎಂದು ಅವರು ಜುಲೈನಲ್ಲಿ ಹೇಳಿದ್ದರು.
600 ಸಂಸ್ಥೆಗಳಿಂದ ನ್ಯಾಯಾಲಯದ ಮೊರೆ
ಮುಖ್ಯವಾಗಿ ಉನ್ನತ ಶಿಕ್ಷಣ ಕ್ಷೇತ್ರ ಮತ್ತು ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಹಲವು ಸಂಸ್ಥೆಗಳು ಹೊಸ ನಿಯಮ ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು. ದಾವೆ ಹೂಡಿರುವವರು ಸುಮಾರು 600 ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿದ್ದಾರೆ.
ಆದರೆ, ಅಮೆರಿಕದಲ್ಲಿ 5,000ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿವೆ ಎಂದು ನ್ಯಾಯಾಧೀಶರು ಗಮನಿಸಿದ್ದಾರೆ.
ತಡೆಯಾಜ್ಞೆಯ ಪ್ರಯೋಜನವನ್ನು ದಾವೆ ಹೂಡಿರುವ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂಬ ಸರಕಾರದ ವಾದವನ್ನೂ ಅವರು ತಿರಸ್ಕರಿಸಿದ್ದಾರೆ. ಹಾಗೆ ಮಾಡಿದರೆ, ಯಾವ ವಿದ್ಯಾರ್ಥಿ ಅಥವಾ ಸಂಸ್ಥೆ ನ್ಯಾಯಾಲಯದ ಆದೇಶದ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ನಿರ್ಧರಿಸಬೇಕಾಗುತ್ತದೆ. ಇದರಿಂದ ವಿವಿಧ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪರಸ್ಪರ ಅಸಂಗತ ನಿರ್ಧಾರಗಳು ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಪತ್ರಕರ್ತರ ವೀಸಾ ದುರುಪಯೋಗದ ಆತಂಕ
ಹೊಸ ನಿಯಮವನ್ನು ಸರಕಾರದ ಟೀಕಾಕಾರರ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆಯೂ ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಸರಕಾರ ಅಥವಾ ಅಧಿಕಾರಿಗಳನ್ನು ಟೀಕಿಸುವ ವಿದೇಶಿ ಪತ್ರಕರ್ತರ ವೀಸಾ ನವೀಕರಣವನ್ನು ನಿರಾಕರಿಸುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
‘ಈ ನಿಯಮ ಮತ್ತು ಅದನ್ನು ಸಮರ್ಥಿಸಲು ನೀಡಲಾದ ಕಾರಣಗಳ ನಡುವಿನ ಸಂಬಂಧವು ದುರ್ಬಲವಾಗಿದೆ’ ಎಂದು ಸೇಲರ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಈ ನಿಯಮವು ನಿಜವಾಗಿಯೂ ರಾಷ್ಟ್ರೀಯ ಭದ್ರತೆ ಮತ್ತು ಗಡಿ ರಕ್ಷಣೆಯ ಉದ್ದೇಶ ಹೊಂದಿದೆಯೇ ಅಥವಾ ಶೈಕ್ಷಣಿಕ ಸಂಸ್ಥೆಗಳು ಮತ್ತು ಮಾಧ್ಯಮಗಳ ಮೇಲೆ ಸರಕಾರದ ಹೆಚ್ಚಿನ ನಿಯಂತ್ರಣ ಸಾಧಿಸುವಂತಹ ಬಹಿರಂಗಪಡಿಸದ ಇತರ ಉದ್ದೇಶಗಳನ್ನು ಹೊಂದಿದೆಯೇ ಎಂಬ ಬಗ್ಗೆ ಸಮಂಜಸವಾದ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರಕರಣದ ಅಂತಿಮ ವಿಚಾರಣೆ ನಡೆಯುತ್ತಿರುವ ಅವಧಿಯಲ್ಲಿ ಹೊಸ ವೀಸಾ ನಿಯಮ ಜಾರಿಗೆ ಬರುವುದಿಲ್ಲ. ಅಂದರೆ, ನಾಲ್ಕು ವರ್ಷಗಳ ವಿದ್ಯಾರ್ಥಿ ವೀಸಾ ಮಿತಿ ಮತ್ತು ಪತ್ರಕರ್ತರ 240 ದಿನ/90 ದಿನಗಳ ಮಿತಿಯನ್ನು ಸದ್ಯಕ್ಕೆ ಜಾರಿಗೊಳಿಸುವಂತಿಲ್ಲ. ಪ್ರಕರಣದ ಅಂತಿಮ ತೀರ್ಪು ಇನ್ನೂ ಹೊರಬರಬೇಕಿದೆ.






