‘ಸಂಕಷ್ಟವನ್ನು ನಾಯಕತ್ವ ಎದುರಿಸಲಿದೆ’: ಅಮೆರಿಕದ ‘ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್’ಗೆ ಇರಾನ್ ತಿರುಗೇಟು

ಸಾಂದರ್ಭಿಕ ಚಿತ್ರ (AI)
ವಾಷಿಂಗ್ಟನ್, ಟೆಹ್ರಾನ್ : ಇರಾನ್ ಆಡಳಿತಕ್ಕೆ ಲಭ್ಯವಾಗುವ ಎಲ್ಲಾ ಆರ್ಥಿಕ ನೆರವನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕವು ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಸರ್ಕಾರದ ವಕ್ತಾರೆ ಫಾತೆಮೆ ಮೊಹಾಝೆರಾನಿ, ಅಧ್ಯಕ್ಷರು ಮತ್ತು ದೇಶದ ನಾಯಕತ್ವವು ಇರಾನ್ ಅನ್ನು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳಿಂದ ಹೊರತಂದು ಮುನ್ನಡೆಸಲಿದೆ ಎಂದು ತಿರುಗೇಟು ನೀಡಿದ್ದಾರೆ.
ಯಾವುದೇ ನೇರ ಪ್ರಚೋದನೆಯಿಲ್ಲದೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಿದ ಬಳಿಕ, ಇರಾನ್ನೊಂದಿಗೆ ನಡೆಯುತ್ತಿರುವ ಯುದ್ಧ ಸುಮಾರು ಆರು ತಿಂಗಳು ಪೂರೈಸಿರುವ ಸಂದರ್ಭದಲ್ಲಿ ಅಮೆರಿಕದ ಈ ಆರ್ಥಿಕ ಒತ್ತಡದ ಕಾರ್ಯಾಚರಣೆ ಹೊರಬಿದ್ದಿದೆ.
ಆಪರೇಷನ್ ಎಕನಾಮಿಕ್ ಔಟ್ಕಾಸ್ಟ್ ಎಂದು ಹೆಸರಿಸಲಾದ ಈ ಕ್ರಮಗಳನ್ನು ಬೆಂಬಲಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ಮಿತ್ರರಾಷ್ಟ್ರಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಈ ಹೊಸ ನಿರ್ಬಂಧಗಳು ಡಿಜಿಟಲ್ ಸ್ವತ್ತುಗಳು, ತಂತ್ರಜ್ಞಾನ, ಚಿನ್ನ, ವಾಯುಯಾನ ಮತ್ತು ಜಲಸಾರಿಗೆಯಂತಹ ಐದು ಪ್ರಮುಖ ಕ್ಷೇತ್ರಗಳನ್ನು ಗುರಿಯಾಗಿಸಲಿವೆ. ಜೊತೆಗೆ ತೈಲ ಆದಾಯ ಹಾಗೂ ಆಡಳಿತಕ್ಕೆ ನೆರವು ನೀಡುತ್ತಿರುವ ಆರೋಪ ಹೊತ್ತಿರುವ 60 ಸಂಸ್ಥೆಗಳು, ನೌಕೆಗಳು ಮತ್ತು ವ್ಯಕ್ತಿಗಳನ್ನೂ ಗುರಿಯಾಗಿಸಲಿವೆ.
ಇರಾನ್ ಪ್ರತಿಕ್ರಿಯೆ :
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಸರ್ಕಾರದ ವಕ್ತಾರೆ ಫಾತೆಮೆ ಮೊಹಾಝೆರಾನಿ, ಅಧ್ಯಕ್ಷರು ಮತ್ತು ದೇಶದ ನಾಯಕತ್ವವು ಇರಾನ್ ಅನ್ನು ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳಿಂದ ಹೊರತಂದು ಮುನ್ನಡೆಸಲಿದೆ ಎಂದು ತಿರುಗೇಟು ನೀಡಿದ್ದಾರೆ.
ಟ್ರಂಪ್ ಅವರ ಆರ್ಥಿಕ ಯುದ್ಧ ಮುಂದುವರಿದರೆ, ಕೊಲ್ಲಿ ಪ್ರದೇಶದ ಎಲ್ಲಾ ತೈಲ ರಫ್ತನ್ನು ಟೆಹ್ರಾನ್ ಸ್ಥಗಿತಗೊಳಿಸಲಿದೆ ಎಂದು ಇರಾನ್ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಝಾಯಿ ಎಚ್ಚರಿಸಿದ್ದಾರೆ. ಅಲ್ಲದೆ, ವಾಷಿಂಗ್ಟನ್ನ ನಿರ್ಬಂಧಗಳಿಗೆ ಯಾವುದೇ ರಾಷ್ಟ್ರ ಬೆಂಬಲ ನೀಡಿದರೂ ಅದನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಅಮೆರಿಕದ ಒತ್ತಡದ ಕ್ರಮವನ್ನು ತಳ್ಳಿಹಾಕಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ಇರಾನ್ ವಿರುದ್ಧದ ಆರ್ಥಿಕ ನಿರ್ಬಂಧಗಳು ಹೊಸದೇನಲ್ಲ ಎಂದು ಹೇಳಿದ್ದಾರೆ.
“ಇರಾನಿನ ಜನರನ್ನು ಎದುರಿಸಲು ಅವರಿಗೆ ಬೇರೆ ಯಾವುದೇ ಪರಿಹಾರ ಹೊಳೆಯುತ್ತಿಲ್ಲ. ಆದ್ದರಿಂದ ಅವರು ಹಳೆಯ ಯೋಜನೆಗಳನ್ನೇ ಮತ್ತೆ ಮತ್ತೆ ತರುತ್ತಿದ್ದಾರೆ” ಎಂದು ಅರಾಗ್ಚಿ ಹೇಳಿದ್ದಾರೆ.
ಈ ಬಗ್ಗೆ ಅಲ್ ಜಝೀರಾಗೆ ಪ್ರತಿಕ್ರಿಯಿಸಿರುವ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಪಾಲಿಸಿಯ ಸಂಶೋಧಕ ಸಿನಾ ತೂಸಿ, ದಿಗ್ಬಂಧನವು ಇರಾನ್ಗೆ, ವಿಶೇಷವಾಗಿ ಅದರ ತೈಲ ರಫ್ತಿಗೆ ಸ್ಪಷ್ಟವಾಗಿ ಹಾನಿ ಮಾಡಿದೆ. ಆದರೆ ವಾಷಿಂಗ್ಟನ್ ಬಯಸುವ ರಾಜಕೀಯ ಫಲಿತಾಂಶವನ್ನು ಅದು ನೀಡಿಲ್ಲ. ಇರಾನ್ ಶರಣಾಗಿಲ್ಲ ಎಂದು ಹೇಳಿದ್ದಾರೆ.
ಹಾರ್ಮುಝ್ ಜಲಸಂಧಿ ಇನ್ನೂ ಅಸ್ತವ್ಯಸ್ತಗೊಂಡಿದೆ. ಅಮೆರಿಕ ಹಾಗೂ ಜಾಗತಿಕ ಆರ್ಥಿಕತೆಯ ಮೇಲಿನ ವೆಚ್ಚಗಳು ಹೆಚ್ಚುತ್ತಿವೆ. ಆದ್ದರಿಂದ ಮಿಲಿಟರಿ ಕಾರ್ಯಾಚರಣೆಯು ನಿರ್ಣಾಯಕ ಫಲಿತಾಂಶ ನೀಡಲು ವಿಫಲವಾದ ಕಾರಣ, ಒತ್ತಡವನ್ನು ತೀವ್ರಗೊಳಿಸಲು ಈ ಆರ್ಥಿಕ ಡಿ-ಡೇ ಮುಂದಿಡಲಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.






