ಫೆಲೆಸ್ತೀನಿಯರ ಮೇಲಿನ ದೌರ್ಜನ್ಯದ ವೀಡಿಯೊ ಸೋರಿಕೆ : ಇಸ್ರೇಲ್ನ ಮಾಜಿ ಮಿಲಿಟರಿ ಪ್ರಾಸಿಕ್ಯೂಟರ್ ಬಂಧನ

PHOTO / AP
ಟೆಲ್ಅವೀವ್, ನ.4: ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳ ಮೇಲೆ ಇಸ್ರೇಲ್ ಯೋಧರು ಚಿತ್ರಹಿಂಸೆ ನೀಡಿ ದೌರ್ಜನ್ಯ ಎಸಗುವುದನ್ನು ತೋರಿಸುವ ವೀಡಿಯೊ ಸೋರಿಕೆಯಾದ ಬೆನ್ನಲ್ಲೇ ಇಸ್ರೇಲ್ ಪೊಲೀಸರು ಮಿಲಿಟರಿಯ ಮಾಜಿ ಪ್ರಾಸಿಕ್ಯೂಟರ್ ಮೇಜರ್ ಜನರಲ್ ಯಿಫಾತ್ ತೊಮರ್-ಯೆರುಷಲ್ಮಿಯನ್ನು ಸೋಮವಾರ ತಡರಾತ್ರಿ ಬಂಧಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಇಸ್ರೇಲ್ನ ಎಸ್ಡೆ ತೈಮಾನ್ ಸೇನಾ ನೆಲೆಯಲ್ಲಿ ಬಂಧನದಲ್ಲಿರುವ ಫೆಲೆಸ್ತೀನಿಯನ್ ಕೈದಿಗಳಿಗೆ ನಿಂದನೆ, ಚಿತ್ರಹಿಂಸೆ ಸೇರಿದಂತೆ ದೌರ್ಜನ್ಯ ಎಸಗುತ್ತಿರುವುದು ಜೈಲಿನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಅಸ್ಪಷ್ಟವಾಗಿ ಸೆರೆಯಾಗಿತ್ತು. ಈ ವೀಡಿಯೊವನ್ನು ಯಿಫಾತ್ ಯೆರುಷಲ್ಮಿ ಸೋರಿಕೆ ಮಾಡಿದ್ದರು ಎಂದು ಆರೋಪಿಸಲಾಗಿದ್ದು ಇದರ ವೀಡಿಯೊವನ್ನು ಇಸ್ರೇಲ್ನ ಚಾನೆಲ್ 12 ಪ್ರಸಾರ ಮಾಡಿತ್ತು.ಬಳಿಕ ಹಲವು ಮಾಧ್ಯಮಗಳೂ ಮರುಪ್ರಸಾರ ಮಾಡಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ವೀಡಿಯೊ ಸೋರಿಕೆ ಮಾಡಿದ ಆರೋಪದಲ್ಲಿ ಯಿಫಾತ್ ವಿರುದ್ಧ ಮತ್ತು ದೌರ್ಜನ್ಯ ಎಸಗಿದ ಆರೋಪದಲ್ಲಿ ಐವರು ಯೋಧರ ವಿರುದ್ಧ ಪ್ರಕರಣ ದಾಖಲಿಸಿ 2024ರ ಆಗಸ್ಟ್ನಲ್ಲಿ ವಿಚಾರಣೆ ಆರಂಭಗೊಂಡಿತ್ತು.
ವೀಡಿಯೊ ತಮ್ಮ ಕಚೇರಿಯಿಂದಲೇ ಸೋರಿಕೆಯಾಗಿರುವುದನ್ನು ಒಪ್ಪಿಕೊಂಡ ಯಿಫಾತ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು ಅಕ್ಟೋಬರ್ 30ರಂದು ಇಸ್ರೇಲ್ ಮಿಲಿಟರಿ ಘೋಷಿಸಿದ ಬಳಿಕ ಯಿಫಾತ್ ನಾಪತ್ತೆಯಾಗಿದ್ದರು. ರವಿವಾರ ನಡೆದ ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ್ದ ಇಸ್ರೇಲ್ ಪ್ರಧಾನಿ ನೆತನ್ಯಾಹು `ಇದು ಇಸ್ರೇಲ್ನ ಇತಿಹಾಸದಲ್ಲೇ ಬಹುಶಃ ಅತ್ಯಂತ ತೀವ್ರವಾದ ಸಾರ್ವಜನಿಕ ಸಂಪರ್ಕ ದಾಳಿ'ಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಮವಾರ ತಡರಾತ್ರಿ ಯಿಫಾತ್ರನ್ನು ಬಂಧಿಸಲಾಗಿದ್ದು ಬುಧವಾರದವರೆಗೆ ಕಸ್ಟಡಿ ವಿಧಿಸಲಾಗಿದೆ ಎಂದು ವರದಿಯಾಗಿದೆ.







