‘ಈಗಲೇ ಇರಾನ್ ತೊರೆಯಿರಿ’: ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಮೆರಿಕ ನಾಗರಿಕರಿಗೆ ತುರ್ತು ಎಚ್ಚರಿಕೆ

Photo credit: PTI
ಟೆಹ್ರಾನ್: ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ಭದ್ರತಾ ಕ್ರಮಗಳು ಮತ್ತಷ್ಟು ಬಿಗಿಯಾಗುತ್ತಿರುವ ಹಿನ್ನೆಲೆಯಲ್ಲಿ ಇರಾನ್ ನಲ್ಲಿರುವ ತನ್ನ ನಾಗರಿಕರು ತಕ್ಷಣವೇ ದೇಶವನ್ನು ತೊರೆಯುವಂತೆ ಅಮೆರಿಕ ತುರ್ತು ಎಚ್ಚರಿಕೆ ನೀಡಿದೆ.
ಮಂಗಳವಾರ ಹೊರಡಿಸಲಾದ ಭದ್ರತಾ ಸಲಹೆಯಲ್ಲಿ, ಇರಾನ್ನಲ್ಲಿರುವ ವರ್ಚುವಲ್ ಯುಎಸ್ ರಾಯಭಾರ ಕಚೇರಿ, ಪ್ರತಿಭಟನೆಗಳು ಹೆಚ್ಚಾಗುತ್ತಿದ್ದು, ಅವು ಹಿಂಸಾತ್ಮಕವಾಗುವ ಸಾಧ್ಯತೆ ಇದೆ. ಇದರಿಂದ ಬಂಧನಗಳೂ ಆಗಬಹುದು, ಗಾಯಗಳೂ ಸಂಭವಿಸಬಹುದು ಎಂದು ಎಚ್ಚರಿಸಿದೆ. ಜೊತೆಗೆ, ಹೆಚ್ಚಿದ ಭದ್ರತಾ ಕ್ರಮಗಳು, ರಸ್ತೆ ಮುಚ್ಚುವಿಕೆಗಳು, ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಅಡಚಣೆಗಳು ಹಾಗೂ ಇಂಟರ್ನೆಟ್ ನಿರ್ಬಂಧಗಳು ಜಾರಿಯಲ್ಲಿವೆ ಎಂದು ತಿಳಿಸಿದೆ.
“ಈಗಲೇ ಇರಾನ್ ಬಿಟ್ಟು ತೊರೆಯಿರಿ. ಇರಾನ್ ನಿಂದ ಹೊರಡುವುದಕ್ಕೆ ಅಮೆರಿಕ ಸರ್ಕಾರದ ಸಹಾಯವನ್ನು ಅವಲಂಬಿಸದೆ ಸ್ವಂತ ಯೋಜನೆಯನ್ನು ಹೊಂದಿರಬೇಕು” ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ.
ಇರಾನ್ ಸರ್ಕಾರವು ಮೊಬೈಲ್, ಲ್ಯಾಂಡ್ಲೈನ್ ಹಾಗೂ ರಾಷ್ಟ್ರೀಯ ಇಂಟರ್ನೆಟ್ ನಿರ್ಬಂಧಿಸಿದೆ ಎಂದು ಹೇಳಲಾಗಿದ್ದು, ಇದೇ ವೇಳೆ ವಿಮಾನಯಾನ ಸಂಸ್ಥೆಗಳು ಇರಾನ್ ಗೆ ಮತ್ತು ಅಲ್ಲಿಂದ ವಿಮಾನ ಸೇವೆಗಳನ್ನು ಮಿತಿಗೊಳಿಸುವುದು ಅಥವಾ ರದ್ದುಗೊಳಿಸುವುದನ್ನು ಮುಂದುವರೆಸಿವೆ. ಶುಕ್ರವಾರದವರೆಗೆ ಹಲವು ವಿಮಾನ ಸೇವೆಗಳು ಸ್ಥಗಿತಗೊಂಡಿವೆ ಎಂದು ಉಲ್ಲೇಖಿಸಲಾಗಿದೆ.
ದೇಶದಿಂದ ಹೊರಡುವ ಸಾಧ್ಯತೆ ಇರುವವರು ಭೂಮಾರ್ಗದ ಮೂಲಕ ಅರ್ಮೇನಿಯಾ ಅಥವಾ ತುರ್ಕಿಯೇ ಗೆ ತೆರಳುವ ಆಯ್ಕೆಯನ್ನು ಪರಿಗಣಿಸುವಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ಇರಾನ್ ನಲ್ಲಿ ಇರುವ ಅಮೆರಿಕ ನಾಗರಿಕರು ದೀರ್ಘಾವಧಿ ಬಂಧನದ ಗಂಭೀರ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದು, ಯುಎಸ್ ಪಾಸ್ಪೋರ್ಟ್ ಪ್ರದರ್ಶಿಸುವುದು ಅಥವಾ ಯುನೈಟೆಡ್ ಸ್ಟೇಟ್ಸ್ಗೆ ಸಂಬಂಧ ಹೊಂದಿರುವುದರಿಂದ ಬಂಧನಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದೆ.







