ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ ನಾಲ್ವರು ಮೃತ್ಯು

Photo Credit : aljazeera.com
ಬೈರುತ್, ಮಾ.15: ದಕ್ಷಿಣ ಲೆಬನಾನ್ನ ಹಲವೆಡೆ ಶನಿವಾರ ತಡರಾತ್ರಿಯಿಂದ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 4 ಮಂದಿ ಮೃತಪಟ್ಟಿದ್ದು, ಇತರ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕರಾವಳಿ ನಗರವಾದ ಸಿಡಾನ್ನ ಉತ್ತರದ ಜಿಲ್ಲೆಯಲ್ಲಿ ವಸತಿ ಕಟ್ಟಡದ ಅಪಾರ್ಟ್ಮೆಂಟ್ ಮೇಲೆ ಶನಿವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಸಿಡಾನ್ನ ಸಮೀಪದ ಅಲ್-ಖತ್ರಾನಿ ಗ್ರಾಮದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಲೆಬನಾನ್ನ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ನ್ಯೂಸ್ ಏಜೆನ್ಸಿ(ಎನ್ಎನ್ಎ) ವರದಿ ಮಾಡಿದೆ. ಲೆಬನಾನ್ನಾದ್ಯಂತ ಹಿಜ್ಬುಲ್ಲಾಗಳ ಮೂಲಸೌಕರ್ಯಗಳನ್ನು ಗುರಿಯಾಗಿಸಿದ ದಾಳಿ ಮುಂದುವರಿಯಲಿದೆ. ಬೈರುತ್ನಲ್ಲಿ ಹಿಜ್ಬುಲ್ಲಾದ ರದ್ವಾನ್ ಪಡೆಯ ಕಮಾಂಡ್ ಕೇಂದ್ರಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ರವಿವಾರ ಹೇಳಿದೆ.
ಈ ಮಧ್ಯೆ, ಇಸ್ರೇಲ್ ಜೊತೆ ಮಾತುಕತೆ ನಡೆಸಲು ನಿಯೋಗವನ್ನು ರಚಿಸಿ ಇಸ್ರೇಲ್ಗೆ ಆಹ್ವಾನ ನೀಡಲಾಗಿದೆ. ಆದರೆ ಅವರಿಂದ ಪ್ರತ್ಯುತ್ತರ ಬಂದಿಲ್ಲ ಎಂದು ಲೆಬನಾನ್ ಸರಕಾರದ ಮೂಲಗಳು ಹೇಳಿವೆ. ಲೆಬನಾನ್ ಮತ್ತು ಇಸ್ರೇಲ್ ನಡುವೆ ನೇರ ಮಾತುಕತೆ ನಡೆಯಬೇಕು. ಇಲ್ಲದಿದ್ದರೆ ಲೆಬನಾನ್ನ ಅವ್ಯವಸ್ಥೆಯ ಪ್ರಪಾತಕ್ಕೆ ಕುಸಿಯಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರೋನ್ ಎಚ್ಚರಿಕೆ ನೀಡಿದ್ದು ಪ್ಯಾರಿಸ್ನಲ್ಲಿ ಮಾತುಕತೆಯನ್ನು ಆಯೋಜಿಸಲು ಸಿದ್ಧ ಎಂದು ಹೇಳಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.







