ಲೆಬನಾನ್: ಇಸ್ರೇಲ್ ದಾಳಿಯಲ್ಲಿ ಮೂವರು ಸೈನಿಕರ ಸಹಿತ 9 ಮೃತ್ಯು

Photo Credit : X \ @MarioNawfal
ಬೈರೂತ್, ಜೂ. 6: ದಕ್ಷಿಣ ಲೆಬನಾನ್ನಲ್ಲಿ ಶನಿವಾರ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 9 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸೇನೆ ತಿಳಿಸಿದೆ.
ನಬತಿಯೆಹ್ ಮತ್ತು ಮರ್ಜಯೋನ್ ಪಟ್ಟಣಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಾಗುತ್ತಿದ್ದ ಮಿಲಿಟರಿ ವಾಹನವನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಬ್ರಿಗೇಡಿಯರ್ ಜನರಲ್ ಹಾಗೂ ಇತರ ಇಬ್ಬರು ಯೋಧರು ಮೃತಪಟ್ಟಿದ್ದಾರೆ.
ಸಕ್ಸಾಕಿಯಾ ಗ್ರಾಮದ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ ಆರು ನಾಗರಿಕರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸ್ಥಿರತೆಯನ್ನು ಪುನಃಸ್ಥಾಪಿಸುವ ಮತ್ತು ಸಮಗ್ರ ಕದನ ವಿರಾಮವನ್ನು ಜಾರಿಗೊಳಿಸುವ ಪ್ರಯತ್ನಗಳನ್ನು ಇಸ್ರೇಲ್ ದುರ್ಬಲಗೊಳಿಸುತ್ತಿದೆ ಎಂದು ಲೆಬನಾನ್ ಸೇನೆ ಆರೋಪಿಸಿದೆ.
ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್), ‘ವಾಹನವು ಸಂಶಯಾಸ್ಪದವಾಗಿ ಇಸ್ರೇಲ್ ಪಡೆಗಳ ಕಡೆಗೆ ಚಲಿಸುತ್ತಿತ್ತು. ಸಕ್ರಿಯ ಯುದ್ಧ ವಲಯವಾಗಿರುವ ಆ ಪ್ರದೇಶದಲ್ಲಿ ಗುಂಡಿನ ಸದ್ದು ವರದಿಯಾಗಿತ್ತು. ಪ್ರದೇಶದಲ್ಲಿ ಸೈನ್ಯದ ಚಲನೆಗೆ ಐಡಿಎಫ್ನೊಂದಿಗೆ ಸಮನ್ವಯ ಅಗತ್ಯವಿದೆ. ನಮ್ಮ ಪಡೆಗಳು ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ, ಲೆಬನಾನ್ ಸೇನೆಯ ವಿರುದ್ಧವಲ್ಲ’ ಎಂದು ಹೇಳಿದೆ.




