S I R ವಿರೋಧಿಸಿ ಲಂಡನ್ನಲ್ಲಿ ಭಾರತೀಯ ಹೈಕಮಿಷನ್ ಎದುರು ಎಸ್ಎಫ್ಐ ಧರಣಿ
ಮೋದಿ ಬೆಂಬಲಿಗರಿಂದಲೂ ಪ್ರತಿಭಟನೆ

Photo: India Today
ಲಂಡನ್: ಭಾರತದ ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಎದುರು ಶುಕ್ರವಾರ ವಿದ್ಯಾರ್ಥಿ ಸಂಘಟನೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಯುಕೆ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಜಮಾಯಿಸಿದರು ಎಂದು ಪಿಟಿಐ ವರದಿ ಮಾಡಿದೆ.
‘ಸ್ಟ್ಯಾಂಡ್ ಇನ್ ಸಾಲಿಡಾರಿಟಿ’ (Stand in Solidarity) ಎಂಬ ಘೋಷಣೆಯಡಿ ನಡೆದ ಪ್ರತಿಭಟನೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ಭಾರತದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಡಲಾಯಿತು. ಕಾಕ್ರೋಚ್ ಜನತಾ ಪಾರ್ಟಿ ಮುಂದಿಟ್ಟಿರುವ ಬೇಡಿಕೆಗಳಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಇದೇ ವಿಚಾರವಾಗಿ ಇತ್ತೀಚೆಗೆ ಇಂಡಿಯಾ ಹೌಸ್ ಎದುರು ತುರ್ತು ಪ್ರತಿಭಟನೆ ಕೂಡಾ ನಡೆದಿತ್ತು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಪ್ರತಿಯಾಗಿ, ಮೋದಿ ಬೆಂಬಲಿಗರ ಒಂದು ಸಣ್ಣ ಗುಂಪು ಪ್ರತಿಪ್ರತಿಭಟನೆ ನಡೆಸಿತು. ಪರಿಸ್ಥಿತಿ ಉದ್ವಿಗ್ನಗೊಳ್ಳದಂತೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸ್ ಅಧಿಕಾರಿಗಳು ಎರಡೂ ಗುಂಪುಗಳ ನಡುವೆ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು. ಎರಡೂ ಗುಂಪುಗಳು ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿದವು.
ಎಸ್ಎಫ್ಐ ಬೆಂಬಲಿಗರು ‘ಆಜಾದಿ’ ಮತ್ತು ‘ಸಾರೆ ಜಹಾಂ ಸೆ ಅಚ್ಛಾ’ ಎಂಬ ಘೋಷಣೆಗಳನ್ನು ಕೂಗಿದರು. ಇದಕ್ಕೆ ಪ್ರತಿಯಾಗಿ ಮೋದಿ ಬೆಂಬಲಿಗರು ‘ಭಾರತ್ ಮಾತಾ ಕಿ ಜೈ’ ಮತ್ತು ‘ಮೋದಿ, ಮೋದಿ’ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಕಟೌಟ್ನ್ನೂ ಪ್ರದರ್ಶಿಸಲಾಯಿತು ಎಂದು ವರದಿಯಾಗಿದೆ.
ಪ್ರತಿಭಟನೆಯ ಕುರಿತು ಹೇಳಿಕೆ ನೀಡಿದ ಎಸ್ಎಫ್ಐ ಯುಕೆ, “ಮತದಾರರ ಹಕ್ಕುಗಳನ್ನು ಅಳಿಸಿಹಾಕುವುದನ್ನು ನಾವು ಸಹಿಸುವುದಿಲ್ಲ. ಪೊಲೀಸ್ ದೌರ್ಜನ್ಯವನ್ನೂ ಸಹಿಸುವುದಿಲ್ಲ. ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಾವು ಇಲ್ಲಿ ಸೇರಿದ್ದೇವೆ” ಎಂದು ತಿಳಿಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಹಲವು ವಕ್ತಾರರು, ಪ್ರತಿಪ್ರತಿಭಟನಾಕಾರರ ಘೋಷಣೆಗಳಿಗೆ ‘ಜೈ ಭೀಮ್’ ಮತ್ತು ‘ಶೇಮ್’ (ನಾಚಿಕೆಯಾಗಬೇಕು) ಎಂಬ ಘೋಷಣೆಗಳ ಮೂಲಕ ಪ್ರತಿಕ್ರಿಯಿಸುವಂತೆ ಜನರಿಗೆ ಕರೆ ನೀಡಿದರು. ಇತ್ತ ಸರಕಾರದ ಬೆಂಬಲಿಗರೂ ಧ್ವನಿವರ್ಧಕಗಳ ಮೂಲಕ ಇದೇ ರೀತಿಯ ‘ಶೇಮ್’ ಘೋಷಣೆಗಳನ್ನು ಕೂಗಲು ಪ್ರಯತ್ನಿಸಿದ್ದಾರೆ.
ಶುಕ್ರವಾರ ನಡೆದ ಪ್ರತಿಭಟನೆ ಮತ್ತು ಪ್ರತಿಪ್ರತಿಭಟನೆಯ ಬಳಿಕ, ಮುಂದಿನ ದಿನಗಳಲ್ಲಿಯೂ ಲಂಡನ್ನಲ್ಲಿ ಇಂತಹ ಮತ್ತಷ್ಟು ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.






