Pakistan | ಮರ್ಯಮ್ ನವಾಝ್ ಗೆ ಹಫೀಝ್ ಸಯೀದ್ ಬೆಂಬಲಿತ ಪಕ್ಷದಿಂದ ಕಾನೂನು ನೋಟಿಸ್
7 ದಿನಗಳೊಳಗೆ ನಿಶ್ಶರ್ತ ಕ್ಷಮೆಯಾಚನೆಗೆ ಆಗ್ರಹ

ಮಾರ್ಯಾಮ್ ನವಾಝ್ , ಹಾಫೀಝ್ ಸಯೀದ್ | Photo Credit : PTI
ಲಾಹೋರ್, ನ.14: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಎನ್ನಲಾದ ಹಫೀಝ್ ಸಯೀದ್ ಜೊತೆ ನಂಟು ಹೊಂದಿರುವ ರಾಜಕೀಯ ಪಕ್ಷವಾದ ಮಾರ್ಕಾಝಿ ಮುಸ್ಲಿಂ ಲೀಗ್ (PMML), ತನ್ನನ್ನು ಭಯೋತ್ಪಾದಕ, ಅಕ್ರಮ ಹಾಗೂ ನಿಷೇಧಿತ ಸಂಘಟನೆಯೆಂದು ಆರೋಪಿಸಿದ್ದಕ್ಕಾಗಿ ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಮರ್ಯಮ್ ನವಾಝ್ ಅವರಿಗೆ ಕಾನೂನು ನೋಟಿಸ್ ಜಾರಿಗೊಳಿಸಿದೆ.
ಮರ್ಯಮ್ ನವಾಝ್ ಅವರು ತಮ್ಮ ಹೇಳಿಕೆಗಳನ್ನು ಹಿಂಪಡೆಯಬೇಕು, ವಿವಾದಿತ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಬೇಕು ಹಾಗೂ ಏಳು ದಿನಗಳೊಳಗೆ ಸಾರ್ವಜನಿಕವಾಗಿ ನಿಶ್ಶರ್ತ ಕ್ಷಮೆಯಾಚಿಸಬೇಕೆಂದು PMML ಶುಕ್ರವಾರ ಆಗ್ರಹಿಸಿದೆ.
PMML ಪಕ್ಷವನ್ನು ಹಫೀಝ್ ಸಯೀದ್ ಸ್ಥಾಪಿಸಿದ ಜಮಾತ್-ಉದ್ದವ್ವ(JUD) ಸಂಘಟನೆಯ ರಾಜಕೀಯ ಮುಖವಾಣಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ವಿಶ್ವಸಂಸ್ಥೆಯಿಂದ ಭಯೋತ್ಪಾದಕನೆಂದು ಘೋಷಿಸಲ್ಪಟ್ಟಿರುವ ಹಫೀಝ್ ಸಯೀದ್, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ನೆರವು ನೀಡಿದ ಹಲವು ಪ್ರಕರಣಗಳಲ್ಲಿ ದೋಷಿಯಾಗಿದ್ದಾನೆ.
ನ. 8ರಂದು ನಡೆದ ಗುಜ್ರನ್ ವಾಲಾ ರಾಷ್ಟ್ರೀಯ ಅಸೆಂಬ್ಲಿ ಉಪಚುನಾವಣೆಯಲ್ಲಿ ಮರ್ಯಮ್ ನವಾಝ್ ಅವರ ಆಡಳಿತಾರೂಢ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್ (PML-N) ಪಕ್ಷದ ಅಭ್ಯರ್ಥಿ ರಶೀದ್ ಬಶೀರ್ ವಿರ್ಕ್ ಅವರು PMML ಅಭ್ಯರ್ಥಿ ಇಬ್ರಾಹೀಂ ಗುಜ್ಜಾರ್ ವಿರುದ್ಧ ಜಯಗಳಿಸಿದ್ದರು.
PMML ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು ಹಾಗೂ 50 ಮತಗಟ್ಟೆಗಳ ಮತಗಳ ಮರು ಎಣಿಕೆಗೆ ಆಗ್ರಹಿಸಿತ್ತು. ಈ ಚುನಾವಣಾ ವಿವಾದದ ಬಳಿಕ ಮರ್ಯಮ್ ಅವರು PMML ಪಕ್ಷವನ್ನು ಭಯೋತ್ಪಾದಕ, ಅಕ್ರಮ ಹಾಗೂ ನಿಷೇಧಿತ ಸಂಘಟನೆ ಎಂದು ಆರೋಪಿಸಿದ್ದರು. ಈ ಹೇಳಿಕೆಗಳನ್ನು ಹಿಂಪಡೆದು, ಕ್ಷಮೆಯಾಚಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳಿಂದ ಸಂಬಂಧಿಸಿದ ಪೋಸ್ಟ್ ಗಳನ್ನು ಅಳಿಸಿಹಾಕಬೇಕೆಂದು ಪಕ್ಷದ ನಾಯಕ ಖಾಲಿದ್ ಮಸೂದ್ ಸಂಧು ಕಾನೂನು ನೋಟಿಸ್ ಮೂಲಕ ಆಗ್ರಹಿಸಿದ್ದಾರೆ.
2022ರಿಂದ ಚುನಾವಣಾ ಆಯೋಗದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ PMML ಹೇಳಿಕೊಂಡಿದೆ. ತನ್ನ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.
ಭಯೋತ್ಪಾದನೆಗೆ ಹಣಕಾಸಿನ ನೆರವು ಒದಗಿಸಿದ ಆರೋಪದಲ್ಲಿ ಹಫೀಝ್ ಸಯೀದ್ ನನ್ನು 2019ರಿಂದ ಲಾಹೋರ್ ನ ಕೋಟ್ ಲಾಖ್ಪತ್ ಜೈಲಿನಲ್ಲಿರಿಸಲಾಗಿದೆ.






