ಭಾರತದ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರದ ಬಗ್ಗೆ ಮೋದಿ ಜೊತೆ ಬೈಡನ್ ಚರ್ಚಿಸಲಿ
ಇಲ್ಲದಿದ್ದರೆ ಸಿಪಿಸಿ ಪಟ್ಟಿಗೆ ಸೇರ್ಪಡೆ; ಯುಎಸ್ಸಿಐಆರ್ ಎಫ್ ಮಾಜಿ ಅಧ್ಯಕ್ಷೆ ಹೇಳಿಕೆ

ನ್ಯಾಡಿನ್ ಮೆಯಾಂಝ | Photo : twitter/@nadinemaenza
ವಾಷಿಂಗ್ಟನ್ : ಭಾರತದಲ್ಲಿ, ವಿಶೇಷವಾಗಿ ಹರ್ಯಾಣ ಮತ್ತು ಮಣಿಪುರದಲ್ಲಿ, ಸಾಮೂಹಿಕ ಅಲ್ಪಸಂಖ್ಯಾತ ವಿರೋಧಿ ಗುಂಪು ಹಿಂಸಾಚಾರದ ಸಮಸ್ಯೆಗಳನ್ನು ಮೋದಿಯೊಂದಿಗೆ ಅಮೆರಿಕ ಅಧ್ಯಕ್ಷ ಬೈಡನ್ ಪ್ರಸ್ತಾಪಿಸಬೇಕು. ಅಂತಹ ಹಿಂಸಾಚಾರ ಮುಂದುವರಿದರೆ ಭಾರತವನ್ನು ಧಾರ್ಮಿಕ ಸ್ವಾತಂತ್ರ್ಯದ ವಿಶ್ವದ ಅತ್ಯಂತ ಕೆಟ್ಟ ಅಪರಾಧಿಗಳಲ್ಲಿ ಒಂದು ಎಂದು ನಿಯೋಜಿಸುವುದು ಕಾನೂನಾತ್ಮಕವಾಗಿ ಅನಿವಾರ್ಯ ಎಂದು ಸ್ಪಷ್ಟಪಡಿಸುವಂತೆ ಯುಎಸ್ಸಿಐಆರ್ ಎಫ್ ಮಾಜಿ ಅಧ್ಯಕ್ಷೆ ನ್ಯಾಡಿನ್ ಮೆಯಾಂಝ ಆಗ್ರಹಿಸಿದ್ದಾರೆ.
‘ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯವಸ್ಥಿತ, ಅತಿರೇಕದ ಉಲ್ಲಂಘನೆಗಾಗಿ ಆ ದೇಶವನ್ನು ನಿರ್ಧಿಷ್ಟ ಕಾಳಜಿಯ ದೇಶವೆಂದು ಗುರುತಿಸುವಂತೆ ಯುಎಸ್ಸಿಐಆರ್ ಎಫ್ (ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿನ ಅಮೆರಿಕದ ಸಮಿತಿ) ಕಳೆದ 4 ವರ್ಷಗಳಿಂದಲೂ ಅಮೆರಿಕದ ವಿದೇಶಾಂಗ ಇಲಾಖೆಗೆ ಶಿಫಾರಸು ಮಾಡುತ್ತಿದೆ’ ಎಂದವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಹಿಂದು ತೀವ್ರವಾದಿಗಳ ಗುಂಪಿನ ಹಿಂಸಾಚಾರದ ಘಟನೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಿದೆ. ಮಣಿಪುರ ಮತ್ತು ಹರ್ಯಾಣಗಳು ವಿಶೇಷವಾಗಿ ಕ್ರೂರ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಆಗಸ್ಟಿನಲ್ಲಿ ಶಸ್ತ್ರಸಜ್ಜಿತ ಹಿಂದು ತೀವ್ರವಾದಿಗಳ ಮೆರವಣಿಗೆಯು ಹರ್ಯಾಣದ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ದೊಂಬಿ, ಕಲ್ಲುತೂರಾಟ ಮತ್ತು ದೈಹಿಕ ಹಿಂಸಾಚಾರಕ್ಕೆ ಕಾರಣವಾಗಿದ್ದು ಹಿಂಸಾಚಾರದಲ್ಲಿ 19 ವರ್ಷದ ಇಮಾಮ್ ಹಾಗೂ ಇತರ ಐದು ಮಂದಿ ಮೃತಪಟ್ಟಿದ್ದಾರೆ. ಇದೇ ಸಂದರ್ಭ, ಮಣಿಪುರದಲ್ಲಿ ಕ್ರಿಶ್ಚಿಯನ್ ಕುಕಿ- ಜೋ ಬುಡಕಟ್ಟು ಜನಾಂಗದವರು ಮೇ ತಿಂಗಳಿಂದ ಬಹುಸಂಖ್ಯಾತ ಹಿಂಸಾತ್ಮಕ ದಾಳಿಗಳನ್ನು ಎದುರಿಸಿದ್ದು ಶಿರಚ್ಛೇದ, ದಹನ ಮತ್ತು ಸಾಮೂಹಿಕ ಅತ್ಯಾಚಾರದಂತಹ ಭಯಾನಕ ಕೃತ್ಯಗಳು ನಡೆದಿವೆ.
‘ಕನಿಷ್ಟ ಕಳೆದ ಐದು ವರ್ಷಗಳಿಂದ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಪರಿಸ್ಥಿತಿ ಹದಗೆಟ್ಟಿದ್ದು ನಾವು ವಾಸ್ತವಿಕ ಸತ್ಯಗಳನ್ನು ನಿರ್ಲಕ್ಷಿಸಲಾಗದು. ವಿಶೇಷವಾಗಿ ಮಣಿಪುರಕ್ಕೆ ಬೆಂಕಿಬಿದ್ದಿರುವಾಗ, ಬೈಡನ್ ಆಡಳಿತವು ಈ ವಿಷಯಗಳನ್ನು ಪ್ರಧಾನಿ ಮೋದಿಯೊಂದಿಗೆ ನೇರವಾಗಿ ಪ್ರಸ್ತಾಪಿಸಬೇಕು ಮತ್ತು ಈ ಪರಿಸ್ಥಿತಿ ಬದಲಾಗದಿದ್ದರೆ ಭಾರತವನ್ನು ಸಿಪಿಸಿ ಎಂದು ನಿಯೋಜಿಸಲು ಕಾನೂನಾತ್ಮಕವಾಗಿ ಅನಿವಾರ್ಯ ಎಂದು ವಿವರಿಸಬೇಕಾಗಿದೆ’ ಎಂದು ನ್ಯಾಡಿನ್ ಹೇಳಿದ್ದಾರೆ.
ಇದೇ ಸಂದರ್ಭ ಮಾತನಾಡಿದ ‘ನಾರ್ಥ್ ಅಮೆರಿಕನ್ ಮಣಿಪುರ್ ಟ್ರೈಬಲ್ ಅಸೋಸಿಯೇಷನ್(ಎನ್ಎಎಂಟಿಎ)’ ಸಹಸಂಸ್ಥಾಪಕಿ ಫ್ಲೋರೆನ್ಸ್ ಲೋವ್, ಮಣಿಪುರದಲ್ಲಿ ತಮ್ಮ ಕುಟುಂಬದ ಘೋರ ಅನುಭವವನ್ನು ಹಂಚಿಕೊಂಡರು. ‘ ನನ್ನ ಕುಟುಂಬದ ಮನೆಯ ಮೇಲೆ ದಾಳಿ ಮಾಡಲಾಯಿತು. ಚರ್ಚ್ ಗಳನ್ನು ಸುಟ್ಟುಹಾಕಿದ ಗುಂಪಿನಿಂದ ತಪ್ಪಿಸಿಕೊಳ್ಳಲು ನನ್ನ ತಾಯಿ ಓಡಿಹೋಗಿ ಅಡಗಿಕೊಳ್ಳಬೇಕಾಯಿತು. ಬೆಂಕಿ ಮತ್ತು ಲೂಟಿಯಿಂದ ಅವರು ಎಲ್ಲವನ್ನೂ ಕಳೆದುಕೊಂಡರು. ಆದರೆ ಇವರು ಅದೃಷ್ಟವಂತರು ಎಂದು ನಾನು ಅಂದುಕೊಂಡೆ. ಯಾಕೆಂದರೆ ಅದೇ ದಿನ, ನನ್ನ ಬುಡಕಟ್ಟಿನ ಇತರ ಕೆಲವರು ಇಷ್ಟು ಅದೃಷ್ಟವಂತರಾಗಿರಲಿಲ್ಲ. ಕೆಲವರನ್ನು ಹೊಡೆದು ಸಾಯಿಸಲಾಯಿತು, ಇತರ ಕೆಲವರನ್ನು ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ದಹಿಸಲಾಯಿತು. 7 ವರ್ಷದ ಬಾಲಕನನ್ನೂ ಅವರು ಬಿಡಲಿಲ್ಲ’ ಎಂದವರು ಹೇಳಿದ್ದಾರೆ.
ಹರ್ಯಾಣದಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ವಿರೋಧಿ ಹಿಂಸಾಚಾರದ ಕಾರಣವನ್ನು ತನಿಖೆ ನಡೆಸಿದ ಸತ್ಯಶೋಧನಾ ಸಮಿತಿಯ ಭಾಗವಾಗಿದ್ದ ಆಶ್ತಾ ಸವ್ಯಸಾಚಿ , ಹಿಂಸಾಚಾರಕ್ಕೆ ಮುಸ್ಲಿಮರನ್ನು ದೂಷಿಸುವ ಹಿಂದೂ ಪ್ರಾಬಲ್ಯವಾದಿಗಳು ಹರಡಿದ ಕಟ್ಟುಕಥೆಗಳನ್ನು ಬಿಚ್ಚಿಟ್ಟರು. ‘ಬಲಪಂಥೀಯ ಗುಂಪುಗಳು ಮುಸ್ಲಿಮರ ವಿರುದ್ಧ ನಿರಂತರ ದ್ವೇಷದ ಅಭಿಯಾನಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದವು. ಮುಸ್ಲಿಮರನ್ನು ಗುರಿಯಾಗಿಸುವ ಪ್ರಚೋದನಕಾರಿ ಮಾಧ್ಯಮ ವಿಷಯವನ್ನು ಬಲಪಂಥೀಯ ಹಿಂದೂ ಉಗ್ರಗಾಮಿ ಗುಂಪುಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದವು. ಘೋರ ಪ್ರಚೋದನೆಯ ಹೊರತಾಗಿಯೂ ಪೊಲೀಸರು ಮತ್ತು ಆಡಳಿತ ಹಿಂಸಾಚಾರದ ಬಗ್ಗೆ ಹೆಚ್ಚಿನ ಅಸಡ್ಡೆ ತೋರಿತ್ತು. ನಂತರ ನಡೆದ ಹಿಂಸಾಚಾರದಲ್ಲಿ ಮುಸ್ಲಿಮರ ಮಾಲಕತ್ವದ ಸುಮಾರು 1,200 ಅಂಗಡಿ ಹಾಗೂ ವ್ಯಾಪಾರ ಮಳಿಗೆಗಳನ್ನು ಧ್ವಂಸಗೊಳಿಸಲಾಯಿತು’ ಎಂದವರು ಹೇಳಿದ್ದಾರೆ.
‘ಭಾರತದಲ್ಲಿ ಹಿಂದೂ ಬಲಪಂಥೀಯರು ಇಂದು ಅನುಭವಿಸುತ್ತಿರುವ ಈ ರೀತಿಯ ನಿರ್ಭಯವು ಇತಿಹಾಸದಲ್ಲಿ ಈ ಹಿಂದೆಂದೂ ಸಂಭವಿಸಿಲ್ಲ. ಎಷ್ಟರಮಟ್ಟಿಗೆ ನೀವು ಮುಸ್ಲಿಮರೊಂದಿಗೆ ಕ್ರೂರವಾಗಿ ವರ್ತಿಸುತ್ತೀರೋ , ನೀವು ರಾಜಕೀಯದಲ್ಲಿ ಯಶಸ್ವಿಯಾಗುವ ಅವಕಾಶ ಹೆಚ್ಚಿರುತ್ತದೆ ಎಂಬ ರೀತಿಯ ದ್ವೇಷಭಾವನೆಯನ್ನು ಈ ಸರಕಾರ ಪ್ರೇರೇಪಿಸಿದೆ’ ಎಂದು ಪ್ರಮುಖ ಕಾರ್ಯಕರ್ತ ಶರ್ಜೀಲ್ ಉಸ್ಮಾನಿ ಹೇಳಿದ್ದಾರೆ.