Libya | ಮಾಜಿ ನಾಯಕ ಮುಅಮ್ಮರ್ ಗದಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗದಾಫಿ ಹತ್ಯೆ

ಟ್ರಿಪೋಲಿ: ಲಿಬಿಯಾದ ಮಾಜಿ ನಾಯಕ ಮುಅಮ್ಮರ್ ಮುಹಮ್ಮದ್ ಅಬು ಮಿನ್ಯಾರ್ ಅಲ್-ಗದಾಫಿ ಅವರ ಪುತ್ರ ಸೈಫ್ ಅಲ್-ಇಸ್ಲಾಂ ಗದಾಫಿ ಅವರನ್ನು ಜಿಂಟಾನ್ ಪಟ್ಟಣದಲ್ಲಿರುವ ಅವರ ನಿವಾಸದಲ್ಲಿ ಮುಸುಕುಧಾರಿಗಳು ನುಗ್ಗಿ ಹತ್ಯೆಗೈದಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದಾಗಿ aljazeera ವರದಿ ಮಾಡಿದೆ.
ಗದಾಫಿ ಅವರ ವಕೀಲ ಖಲೀದ್ ಅಲ್-ಝೈದಿ ಹಾಗೂ ರಾಜಕೀಯ ಸಲಹೆಗಾರ ಅಬ್ದುಲ್ಲಾ ಉಸ್ಮಾನ್ ಸಾಮಾಜಿಕ ಜಾಲತಾಣಗಳ ಮೂಲಕ ಸಾವಿನ ಮಾಹಿತಿಯನ್ನು ದೃಢಪಡಿಸಿದ್ದಾರೆ. ಟ್ರಿಪೋಲಿಯಿಂದ ಸುಮಾರು 136 ಕಿ.ಮೀ ದೂರದಲ್ಲಿರುವ ಜಿಂಟಾನ್‌ನಲ್ಲಿನ ಮನೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ದಾಳಿ ನಡೆಸಿದ್ದು, ಭದ್ರತಾ ಕ್ಯಾಮೆರಾಗಳನ್ನು ಮುಚ್ಚಿ ಸಾಕ್ಷ್ಯಗಳನ್ನು ಅಳಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಕೃತ್ಯವನ್ನು ಗದಾಫಿ ಅವರ ರಾಜಕೀಯ ತಂಡ “ಹೇಡಿತನ ಮತ್ತು ವಿಶ್ವಾಸಘಾತುಕ ಹತ್ಯೆ” ಎಂದು ಆರೋಪಿಸಿದೆ.
ಈ ಹತ್ಯೆಯ ಕುರಿತು ತುರ್ತು ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಟ್ರಿಪೋಲಿ ಮೂಲದ ಹೈ ಸ್ಟೇಟ್ ಕೌನ್ಸಿಲ್‌ನ ಮಾಜಿ ಮುಖ್ಯಸ್ಥ ಖಲೀದ್ ಅಲ್-ಮಿಶ್ರಿ ಆಗ್ರಹಿಸಿದ್ದಾರೆ.
ಸೈಫ್ ಅಲ್-ಇಸ್ಲಾಂ ಗದಾಫಿ ಲಿಬಿಯಾದಲ್ಲಿ ಯಾವುದೇ ಅಧಿಕೃತ ಹುದ್ದೆ ವಹಿಸಿರದಿದ್ದರೂ, 2000ರಿಂದ 2011ರವರೆಗೆ ದೇಶದ ಪ್ರಮುಖ ರಾಜಕೀಯ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದರು. 2011ರ ಲಿಬಿಯಾ ದಂಗೆ ಬಳಿಕ ಅವರನ್ನು ಬಂಧಿಸಿ ಜಿಂಟಾನ್‌ನಲ್ಲಿ ಇರಿಸಲಾಗಿತ್ತು. 2017ರಲ್ಲಿ ಕ್ಷಮಾದಾನದಡಿ ಬಿಡುಗಡೆಯಾದ ಬಳಿಕ ಅವರು ಅಲ್ಲಿ ವಾಸಿಸುತ್ತಿದ್ದರು.
1972ರಲ್ಲಿ ಟ್ರಿಪೋಲಿಯಲ್ಲಿ ಜನಿಸಿದ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಪಶ್ಚಿಮ ರಾಷ್ಟ್ರಗಳೊಂದಿಗೆ ಲಿಬಿಯಾದ ಸಂಬಂಧ ಸುಧಾರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ 2011ರ ದಂಗೆ ವೇಳೆ ತಂದೆಯ ಆಡಳಿತಕ್ಕೆ ಬೆಂಬಲ ನೀಡಿದ ಹಿನ್ನೆಲೆ ಮಾನವೀಯತೆಯ ವಿರುದ್ಧದ ಅಪರಾಧ ಆರೋಪಗಳನ್ನು ಎದುರಿಸಿದ್ದರು. 2015ರಲ್ಲಿ ಟ್ರಿಪೋಲಿ ನ್ಯಾಯಾಲಯವು ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಿತ್ತು. 2021ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದರೂ, ಹಳೆಯ ತೀರ್ಪಿನ ಕಾರಣ ಅವರ ನಾಮಪತ್ರ ವಿವಾದಕ್ಕೀಡಾಗಿ ಅನರ್ಹಗೊಂಡಿತ್ತು.







