ಕಣ್ಣೀರಿನೊಂದಿಗೆ ವಿಶ್ವಕಪ್ಗೆ ವಿದಾಯ ಕೋರಿದ ಮೆಸ್ಸಿ

Photo Credit : PTI
ನ್ಯೂಜರ್ಸಿ, ಜು. 20: ಫಿಫಾ ವಿಶ್ವಕಪ್ ಫೈನಲ್ನಲ್ಲಿ ರವಿವಾರ ರಾತ್ರಿ ಸ್ಪೇನ್ ವಿರುದ್ಧ ಅರ್ಜೆಂಟೀನ ಪರಾಭವಗೊಂಡ ಬಳಿಕ, ಕತ್ತಿನಲ್ಲಿ ಬೆಳ್ಳಿ ಪದಕ ಧರಿಸಿದ ಲಿಯೊನೆಲ್ ಮೆಸ್ಸಿ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರಗೆ ಹೋದರು.
ಫೈನಲ್ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಬಾರಿಸಿದ ಗೋಲಿನ ಮೂಲಕ ಸ್ಪೇನ್ ಅರ್ಜೆಂಟೀನವನ್ನು 1-0 ಅಂತರದಿಂದ ಸೋಲಿಸಿತು. ಇದರೊಂದಿಗೆ ಹಾಲಿ ಚಾಂಪಿಯನ್ ತಂಡದ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ನಿರಾಶೆಯೊಂದಿಗೆ ಕೊನೆಗೊಂಡಿತು.
ವಿಶ್ವಕಪ್ ಪಾದಾರ್ಪಣೆಯ 20 ವರ್ಷಗಳ ನಂತರ, 39 ವರ್ಷದ ಮೆಸ್ಸಿಗೆ ಮತ್ತೊಂದು ಪವಾಡ ಮಾಡಲು ಸಾಧ್ಯವಾಗಲಿಲ್ಲ. ಸತತ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಬೆನ್ನಟ್ಟುತ್ತಿದ್ದ ಅರ್ಜೆಂಟೀನಾವನ್ನು, ಮೆಟ್ಲೈಫ್ ಸ್ಟೇಡಿಯಂನಲ್ಲಿ ಸ್ಪೇನ್ ದೀರ್ಘಕಾಲದವರೆಗೆ ಕಟ್ಟಿಹಾಕಿತು. ಅಲ್ಲಿ ನೆರೆದಿದ್ದ 80,663 ಪ್ರೇಕ್ಷಕರು ತಮ್ಮ ’ಮೆಸ್ಸಯ್ಯ’ (ರಕ್ಷಕ) ಮತ್ತೊಮ್ಮೆ ಟ್ರೋಫಿ ಎತ್ತುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು.
ಆದರೆ, ಅಲ್ಲಿ ಸ್ಪೇನ್ ತನ್ನ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿತು.
ಕೆನ್ನೆಗಳ ಮೇಲೆ ಹರಿಯುತ್ತಿದ್ದ ಕಣ್ಣೀರಿನೊಂದಿಗೆ ಮೆಸ್ಸಿ ರನ್ನರ್ ಅಪ್ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮೆಸ್ಸಿಯ ಎಂಟು ಗೋಲುಗಳು ಅರ್ಜೆಂಟೀನಾವನ್ನು ಗುಂಪು ಹಂತ ಮತ್ತು ನಾಕೌಟ್ ಸುತ್ತುಗಳನ್ನು ದಾಟಲು ಸಹಾಯ ಮಾಡಿದವು. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ, ಹೆಚ್ಚುವರಿ ಸಮಯದಲ್ಲಿ ಅವರು ಎರಡೂ ಗೋಲುಗಳಿಗೆ ನೆರವಾಗಿದ್ದರು. ಈಜಿಪ್ಟ್ ವಿರುದ್ಧ ಅರ್ಜೆಂಟೀನ 2-0ಯಿಂದ ಹಿನ್ನಡೆಯಲ್ಲಿದ್ದಾಗ ಮತ್ತು ಹೊರ ಬೀಳುವ ಭೀತಿಯಲ್ಲಿದ್ದಾಗ, ಮೊದಲ ಗೋಲಿಗೆ ಕ್ರಾಸ್ ಒದಗಿಸಿದ ಅವರು, ನಂತರ ತಾವೇ ಸಮಬಲದ ಗೋಲು ಬಾರಿಸಿದರು.
ಟೂರ್ನಮೆಂಟ್ನುದ್ದಕ್ಕೂ, ಮೆಸ್ಸಿ ತನ್ನ ಸಹ ಆಟಗಾರರಿಗಿಂತ ಕಡಿಮೆ ಓಡಿದರೂ ಪಂದ್ಯಗಳ ಮೇಲೆ ಪ್ರಭಾವ ಬೀರುವ ತನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಿದರು.
ಅವರು ಮೈದಾನದಲ್ಲಿದ್ದ ಅರ್ಧದಷ್ಟು ಸಮಯ ಕೇವಲ ನಡೆಯುತ್ತಿದ್ದರು, ಪ್ರತಿ ಪಂದ್ಯಕ್ಕೆ ಸರಾಸರಿ ಸುಮಾರು ಐದು ಕಿಲೋಮೀಟರ್ ಕ್ರಮಿಸುತ್ತಿದ್ದರು. ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ಗುಣಮಟ್ಟದ ಆಟದ ಮೂಲಕ ಮಿಂಚಲು ಅವರು ತನ್ನ ಶಕ್ತಿಯನ್ನು ಉಳಿಸಿಕೊಳ್ಳುತ್ತಿದ್ದರು.
ಒಂದು ವೇಳೆ ಇದು ಅವರ ಕೊನೆಯ ಪಂದ್ಯವಾಗಿದ್ದರೆ, ಅವರು ತನ್ನ ವಿಶ್ವಕಪ್ ವೃತ್ತಿಜೀವನವನ್ನು 21 ಗೋಲುಗಳೊಂದಿಗೆ ಕೊನೆಗೊಳಿಸುತ್ತಾರೆ.
ಮೆಸ್ಸಿ ನಿವೃತ್ತಿ ಹೊಂದುತ್ತಾರಾ?
ಲಿಯೋನೆಲ್ ಮೆಸ್ಸಿ ನಿವೃತ್ತಿ ಹೊಂದುತ್ತಾರಾ? ಫಿಫಾ ವಿಶ್ವಕಪ್ 2026 ರ ಫೈನಲ್, ಫುಟ್ಬಾಲ್ನ ಅತಿದೊಡ್ಡ ವೇದಿಕೆಯಲ್ಲಿ ಅವರ ಕೊನೆಯ ಪ್ರದರ್ಶನವೇ?
ಆದರೆ ಅರ್ಜೆಂಟೀನದ ಮುಖ್ಯ ತರಬೇತುದಾರ ಲಿಯೊನೆಲ್ ಸ್ಕಲೋನಿ, ಮೆಸ್ಸಿಯ ಭವಿಷ್ಯವು ಸಂಪೂರ್ಣವಾಗಿ ಅವರ ಸ್ವಂತ ನಿರ್ಧಾರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೆಸ್ಸಿ ಬಯಸುವವರೆಗೆ ಆಡುವುದನ್ನು ಮುಂದುವರಿಸುತ್ತಾರೆ ಎಂದು ಫೈನಲ್ನ ನಂತರ ಮಾತನಾಡಿದ ಸ್ಕಲೋನಿ ಹೇಳಿದರು.
‘‘ಅವರಿಗೆ ಈಗ 39 ವರ್ಷ. ನಂಬಲಾಗುತ್ತಿಲ್ಲ. ನನ್ನ ಕಡೆಯಿಂದ ಹೊಸದಾಗಿ ಹೇಳಲು ಏನೂ ಇಲ್ಲ. ಆಡಲು ಬಯಸುವವರೆಗೂ ಅವರು ಆಡುತ್ತಾರೆ ಹಾಗೂ ತಂಡದ ಎಲ್ಲಾ ಆಟಗಾರರು, ಸಹ ಆಟಗಾರರು ಮತ್ತು ಅವರ ಎಲ್ಲರೂ ಅವರನ್ನು ಬೆಂಬಲಿಸುತ್ತಾರೆ. ಏಕೆಂದರೆ ಅವರು ಸಾರ್ವಕಾಲಿಕ ಅತ್ಯುತ್ತಮ ಫುಟ್ಬಾಲ್ ಆಟಗಾರನಾಗಿದ್ದಾರೆ’’ ಎಂದು ಸ್ಕಲೋನಿ ಹೇಳಿರುವುದಾಗಿ‘ಅತ್ಲೆಟಿಕ್’ ಮಾಡಿದೆ.






