ಲಂಡನ್: ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಜೆಟ್ ವಿಮಾನ ಪತನ

PC: x.com/SKBishnoi29Rule
ಲಂಡನ್: ಇಲ್ಲಿನ ಸೌತ್ಎಂಡ್ ವಿಮಾನ ನಿಲ್ದಾಣದಲ್ಲಿ ಭಾನುವಾರ ಲಘು ವಿಮಾನವೊಂದು ಪತನಗೊಂಡಿದೆ. ಲಂಡನ್ ನಿಂದ ಪೂರ್ವಕ್ಕೆ 72 ಕಿಲೋಮೀಟರ್ ದೂರದಲ್ಲಿರುವ ಈ ವಿಮಾನ ನಿಲ್ದಾಣದ ಅಧಿಕಾರಿಗಳು, ಸಾಮಾನ್ಯ ಯಾನ ವಿಮಾನ ಪತನಗೊಂಡಿರುವ ಈ "ಗಂಭೀರ ಘಟನೆ"ಯನ್ನು ದೃಢಪಡಿಸಿದ್ದಾರೆ.
ಭಾನುವಾರ ಸಂಜೆ 4 ಗಂಟೆಯ ಸುಮಾರಿಗೆ ಈ "ಗಂಭೀರ ಘಟನೆ" ಬಗ್ಗೆ ಎಸ್ಸೆಕ್ಸ್ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಘಟನಾ ಸ್ಥಳದಲ್ಲಿ ಎಲ್ಲ ತುರ್ತು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದು, ಹಲವು ಗಂಟೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ" ಎಂದು ಮೂಲಗಳು ಹೇಳಿವೆ.
ಬೀಚ್ ಕ್ರಾಫ್ಟ್ ಬಿ200 ಸೂಪರ್ ಕಿಂಗ್ ಏರ್ ಹೆಸರಿನ ವೈದ್ಯಕೀಯ ಸಾರಿಗೆ ಜೆಟ್, ರೋಗಿಗಳನ್ನು ಸಾಗಿಸುವ ಸುಸಜ್ಜಿತ ವಿಮಾನವಾಗಿದ್ದು, ನೆದರ್ಲ್ಯಾಂಡ್ ಗೆ ರೋಗಿಗಳನ್ನು ಕರೆದೊಯ್ಯಲು ಬಳಕೆಯಾಗುತ್ತಿತ್ತು ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ.
ಬೆಂಕಿ ಹಾಗೂ ದಟ್ಟವಾದ ಕಪ್ಪು ಹೊಗೆ ಘಟನಾ ಸ್ಥಳದಿಂದ ಹೊಮ್ಮುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪತನಗೊಂಡ ವಿಮಾನ 12 ಮೀಟರ್ ಉದ್ದದ್ದಾಗಿತ್ತು ಎಂದು ಹೇಳಲಾಗಿದೆ.
ವಿಮಾನ ನಿಲ್ದಾಣಕ್ಕೆ ಕುಟುಂಬದ ಜತೆ ಆಗಮಿಸಿದ ಜಾನ್ ಜಾನ್ಸನ್ ಈ ಘಟನೆಗೆ ಸಾಕ್ಷಿಯಾಗಿದ್ದು, ವಿಮಾನದ ಮುಂಭಾಗ ಮೊದಲು ನೆಲಕ್ಕೆ ಢಿಕ್ಕಿ ಹೊಡೆದು ದೊಡ್ಡ ಬೆಂಕಿಯುಂಡೆ ಸೃಷ್ಟಿಯಾಯಿತು ಎಂದು ಅವರು ವಿವರಿಸಿದ್ದಾರೆ. ವಿಮಾನ ಟೇಕಾಫ್ ಆದ ಮೂರು ನಾಲ್ಕು ಸೆಕೆಂಡ್ ಗಳಲ್ಲಿ ಈ ಘಟನೆ ಸಂಭವಿಸಿದೆ. ಎಡಬದಿಗೆ ವಾಲುತ್ತಾ ಬಂದು ಬಹುತೇಕ ತಲೆ ಕೆಳಗಾಗಿ ಕೆಲವೇ ಕ್ಷಣಗಳಲ್ಲಿ ಪತಗೊಂಡಿತು ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದ್ದು, ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.







