ಆತ್ಮೀಯ ಸ್ನೇಹಿತ ಮೋದಿ ಜತೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ: ಟ್ರಂಪ್

PC: x.com/TimesAlgebraIND
ವಾಷಿಂಗ್ಟನ್: ಮುಂದಿನ ವಾರಗಳಲ್ಲಿ ಆತ್ಮೀಯ ಸ್ನೇಹಿತ ನರೇಂದ್ರ ಮೋದಿ ಜತೆಗೆ ಮಾತನಾಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಮ್ಮ ಆಡಳಿತ ಸಂಧಾನ ಮಾತುಕತೆ ಮುಂದುವರಿಸಲಿದೆ ಎಂದು ಪ್ರಕಟಿಸಿದ್ದಾರೆ.
"ಉಭಯ ದೇಶಗಳ ನಡುವಿನ ವ್ಯಾಪಾರ ತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಭಾರತದ ಸಂಧಾನ ಮಾತುಕತೆಗಳನ್ನು ಮುಂದಯವರಿಸಲಿದೆ ಎಂದು ಪ್ರಕಟಿಸುತ್ತಿದ್ದೇನೆ. ಮುಂದಿನ ವಾರಗಳಲ್ಲಿ ನನ್ನ ಅತ್ಯುತ್ತಮ ಸ್ನೇಹಿತ ನರೇಂದ್ರ ಮೋದಿ ಜತೆಗಿನ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ" ಎಂದು ಟ್ರುಥ್ ಸೋಶಿಯಲ್ ಪೋಸ್ಟ್ ನಲ್ಲಿ ಟ್ರಂಪ್ ಹೇಳಿದ್ದಾರೆ.
"ಎರಡು ಶ್ರೇಷ್ಠ ದೇಶಗಳ ನಡುವೆ ಯಶಸ್ವಿ ನಿರ್ಧಾರಕ್ಕೆ ಬರುವಲ್ಲಿ ಯಾವುದೇ ಕಷ್ಟ ಎದುರಾಗದು ಎಂಬ ಖಚಿತ ಭಾವನೆ ನನಗಿಗದೆ" ಎಂದು ಟ್ರಂಪ್ ವಿವರಿಸಿದ್ದಾರೆ.
ಕಳೆದ ಶುಕ್ರವಾರ ಮೋದಿ ಜತೆಗಿನ ತಮ್ಮ ಗೆಳೆತನವನ್ನು ಪುನರುಚ್ಚರಿಸಿದ್ದ ಟ್ರಂಪ್, ಉಭಯ ದೇಶಗಳ ನಡುವಿನ ಸಂಬಂಧ "ಅತ್ಯಂತ ವಿಶೇಷ" ಎಂದು ಹೇಳಿಕೆ ನೀಡುವ ಮೂಲಕ ತಮ್ಮ ನಿಲುವನ್ನು ಸಡಿಲಗೊಳಿಸಿದ್ದರು.
ಇದಕ್ಕೂ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ಮೋದಿ ಜತೆಗೆ ಸದಾ ಸ್ನೇಹದಿಂದ ಇರುತ್ತೇನೆ. ನಾವು ಸದಾ ಸ್ನೇಹಿತರಾಗಿರುತ್ತೇವೆ. ಆದರೆ ಈ ನಿರ್ದಿಷ್ಟ ಕ್ಷಣದಲ್ಲಿ ಅವರು ಮಾಡುತ್ತಿರುವುದನ್ನು ನಾನು ಇಷ್ಟಪಡುವುದಿಲ್ಲ. ಆದರೆ ಭಾರತ ಹಾಗೂ ಅಮೆರಿಕ ವಿಶೇಷ ಬಾಂಧವ್ಯ ಹೊಂದಿದೆ" ಎಂದು ಸ್ಪಷ್ಟಪಡಿಸಿದರು.







