US Midterm Election | ಲಾಸ್ ಏಂಜಲೀಸ್ ಮೇಯರ್ ಆಗಿ ನಿತ್ಯಾ ರಾಮನ್ ಆಯ್ಕೆ
ಹಾಲಿ ಮೇಯರ್ ಕರೆನ್ ಬಾಸ್ಗೆ ಸೋಲುಣಿಸಿದ ಕೇರಳಂ ಮೂಲದ ನಾಯಕಿ

ನಿತ್ಯಾ ರಾಮನ್ (Photo: AP)
ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಗರದ ಮೇಯರ್ ಚುನಾವಣೆಯಲ್ಲಿ ಭಾರತೀಯ ಮೂಲದ ನಿತ್ಯಾ ರಾಮನ್ ಗೆಲುವು ಸಾಧಿಸಿದ್ದಾರೆ. ಹಾಲಿ ಮೇಯರ್ ಕರೆನ್ ಬಾಸ್ ಅವರನ್ನು ಸೋಲಿಸಿರುವ 45 ವರ್ಷದ ರಾಮನ್, ನಗರದ ಮೊದಲ ಏಷ್ಯನ್-ಅಮೆರಿಕನ್ ಮೇಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತ ಎಣಿಕೆಯ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ನಿತ್ಯಾ ರಾಮನ್ ಶೇ. 50.84ರಷ್ಟು ಮತಗಳನ್ನು ಪಡೆದಿದ್ದರೆ, ಕರೆನ್ ಬಾಸ್ ಶೇ. 49.16ರಷ್ಟು ಮತ ಗಳಿಸಿದ್ದಾರೆ. ಸುಮಾರು 16,600 ಮತಗಳ ಅಂತರದಲ್ಲಿ ರಾಮನ್ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ವಿಶ್ಲೇಷಣಾ ಸಂಸ್ಥೆ ಡಿಸಿಷನ್ ಡೆಸ್ಕ್ ಎಚ್ಕ್ಯೂ (DDHQ) ಅವರ ಗೆಲುವನ್ನು ಪ್ರಕಟಿಸಿದೆ.
ಕೇರಳ ಮೂಲದ ನಿತ್ಯಾ ರಾಮನ್
1981ರಲ್ಲಿ ಭಾರತದಲ್ಲಿ ಜನಿಸಿದ ನಿತ್ಯಾ ರಾಮನ್ ಕೇರಳ ಮೂಲದವರು. ಅವರಿಗೆ ಆರು ವರ್ಷ ವಯಸ್ಸಾಗಿದ್ದಾಗ ಕುಟುಂಬ ಅಮೆರಿಕಕ್ಕೆ ವಲಸೆ ಹೋಗಿತ್ತು. 22ನೇ ವಯಸ್ಸಿನಲ್ಲಿ ಅಮೆರಿಕದ ಪೌರತ್ವ ಪಡೆದರು.
ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದ ಅವರು, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ನಗರ ಯೋಜನೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಅವರು, ಚೆನ್ನೈನಲ್ಲಿ 'ಟ್ರಾನ್ಸ್ಪರೆಂಟ್ ಚೆನ್ನೈ' ಎಂಬ ನಗರ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದ್ದರು. ನಗರದ ನಾಗರಿಕ ಸೌಲಭ್ಯಗಳು, ನೈರ್ಮಲ್ಯ ವ್ಯವಸ್ಥೆ ಮತ್ತು ಸಾರ್ವಜನಿಕ ಸೇವೆಗಳ ಕುರಿತು ಅಧ್ಯಯನ ನಡೆಸುವುದು ಸಂಸ್ಥೆಯ ಉದ್ದೇಶವಾಗಿತ್ತು.
2013ರಲ್ಲಿ ಲಾಸ್ ಏಂಜಲೀಸ್ ಗೆ ಸ್ಥಳಾಂತರಗೊಂಡ ಬಳಿಕ ಅಲ್ಲಿನ ನಿರಾಶ್ರಿತರ ಸಮಸ್ಯೆ ಪರಿಹಾರಕ್ಕಾಗಿ ಕೆಲಸ ಆರಂಭಿಸಿದರು. 'SELAH Neighborhood Homeless Coalition' ಎಂಬ ನಿರಾಶ್ರಿತರ ನೆರವಿನ ಸಂಘಟನೆಯ ಸಹಸ್ಥಾಪಕರಾದರು. 'ಟೈಮ್ಸ್ ಅಪ್ ಎಂಟರ್ಟೈನ್ಮೆಂಟ್' ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.
2020ರಲ್ಲಿ ರಾಜಕೀಯ ಪ್ರವೇಶ
2020ರಲ್ಲಿ ಲಾಸ್ ಏಂಜಲೀಸ್ ನಗರ ಮಂಡಳಿಯ ನಾಲ್ಕನೇ ಜಿಲ್ಲೆಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ನಗರ ಮಂಡಳಿಗೆ ಆಯ್ಕೆಯಾದ ಮೊದಲ ಏಷ್ಯನ್-ಅಮೆರಿಕನ್ ಮಹಿಳೆ ಮತ್ತು ಮೊದಲ ದಕ್ಷಿಣ ಏಷ್ಯಾ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2024ರಲ್ಲಿ ಮರು ಆಯ್ಕೆಯಾದರು.
ನಗರ ಮಂಡಳಿಯ ಸದಸ್ಯೆಯಾಗಿ ನಿರಾಶ್ರಿತರ ಸಮಸ್ಯೆ ಪರಿಹಾರ, ಕೈಗೆಟುಕುವ ದರದಲ್ಲಿ ಮನೆಗಳ ನಿರ್ಮಾಣ, ಬಾಡಿಗೆದಾರರ ಹಕ್ಕುಗಳ ರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕ್ರಮಗಳಿಗೆ ಆದ್ಯತೆ ನೀಡಿದ್ದರು. ನಿರಾಶ್ರಿತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವುದರ ಜತೆಗೆ ಶಾಶ್ವತ ವಸತಿ ಮತ್ತು ಅಗತ್ಯ ಸೇವೆಗಳನ್ನು ಒದಗಿಸಬೇಕು ಎಂಬುದು ಅವರ ನಿಲುವಾಗಿದೆ.
ಕಾಡ್ಗಿಚ್ಚಿನ ನಿರ್ವಹಣೆ ಚುನಾವಣೆಯ ಪ್ರಮುಖ ವಿಷಯ
73 ವರ್ಷದ ಕರೆನ್ ಬಾಸ್ ವಿರುದ್ಧ ನಿತ್ಯಾ ರಾಮನ್ ಕಠಿಣ ಸ್ಪರ್ಧೆ ನೀಡಿದ್ದರು. 2026ರ ಫೆಬ್ರವರಿಯಲ್ಲಿ ಮೇಯರ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ರಾಮನ್, ಈ ಹಿಂದೆ ಬಾಸ್ ಅವರನ್ನು ಬೆಂಬಲಿಸಿದ್ದರೂ ಬಳಿಕ ಅವರ ವಿರುದ್ಧವೇ ಕಣಕ್ಕಿಳಿದಿದ್ದರು.
2025ರ ಜನವರಿಯಲ್ಲಿ ಸಂಭವಿಸಿದ ಪೆಸಿಫಿಕ್ ಪಾಲಿಸೇಡ್ಸ್ ಕಾಡ್ಗಿಚ್ಚಿನ ನಿರ್ವಹಣೆ ಬಾಸ್ ಆಡಳಿತಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಪ್ರಮುಖ ವಿಷಯವಾಗಿತ್ತು. ಕಾಡ್ಗಿಚ್ಚಿನ ಸಂದರ್ಭದಲ್ಲಿ ಆಡಳಿತದ ಕ್ರಮಗಳನ್ನು ರಾಮನ್ ಟೀಕಿಸಿದ್ದರು.
ನಗರದ ಬೀದಿಗಳಲ್ಲಿ ವಾಸಿಸುವ ನಿರಾಶ್ರಿತರ ಸಂಖ್ಯೆಯನ್ನು 2028ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ರಾಮನ್ ಹೊಂದಿದ್ದಾರೆ. ಪೊಲೀಸ್ ವ್ಯವಸ್ಥೆಯ ಸುಧಾರಣೆ, ಸಾರ್ವಜನಿಕ ಸುರಕ್ಷತೆ ಮತ್ತು ವಸತಿ ನೀತಿಗಳೂ ಅವರ ಚುನಾವಣಾ ಪ್ರಚಾರದ ಪ್ರಮುಖ ವಿಷಯಗಳಾಗಿದ್ದವು. ಪೊಲೀಸ್ ಮುಖ್ಯಸ್ಥ ಜಿಮ್ ಮೆಕ್ಡೊನೆಲ್ ಅವರನ್ನು ಬದಲಿಸುವ ಪ್ರಸ್ತಾಪವನ್ನೂ ಅವರು ಮುಂದಿಟ್ಟಿದ್ದರು.
ಕರೆನ್ ಬಾಸ್ ಅವರಿಗೆ ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್, ಮಾಜಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸೇರಿದಂತೆ ಪ್ರಮುಖ ಡೆಮಾಕ್ರಟಿಕ್ ನಾಯಕರ ಬೆಂಬಲವಿತ್ತು. ನಿತ್ಯಾ ರಾಮನ್ ಅವರಿಗೆ ಪ್ರಗತಿಪರ ಸಂಘಟನೆಗಳು, ಡೆಮಾಕ್ರಟಿಕ್ ಸೋಷಿಯಲಿಸ್ಟ್ಸ್ ಆಫ್ ಅಮೆರಿಕ ಮತ್ತು ಸಿಯೆರಾ ಕ್ಲಬ್ ಬೆಂಬಲ ನೀಡಿದ್ದವು.
2028ರ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಲಿರುವ ಲಾಸ್ ಏಂಜಲೀಸ್ ನಗರದ ಆಡಳಿತದ ಚುಕ್ಕಾಣಿ ಇದೀಗ ನಿತ್ಯಾ ರಾಮನ್ ಅವರ ಕೈ ಸೇರಲಿದೆ. ಭಾರತೀಯ ಮೂಲದ ಮಹಿಳೆಯೊಬ್ಬರು ಅಮೆರಿಕದ ಪ್ರಮುಖ ಮಹಾನಗರವೊಂದರ ಮೇಯರ್ ಆಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.






