ಸಹೋದ್ಯೋಗಿ ಜತೆ ಪ್ರೇಮಸಂಬಂಧ; ನೆಸ್ಲೆ ಸಿಇಒಗೆ ಗೇಟ್ಪಾಸ್

ಲಾರೆಂಟ್ ಫ್ರೀಕ್ಸ್ PC: x.com/Forbes
ಸ್ವಿಟ್ಜರ್ಲೆಂಡ್: ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿ ಜತೆ "ರಹಸ್ಯ ಪ್ರೇಮ ಸಂಬಂಧ" ಇಟ್ಟುಕೊಂಡಿದ್ದ ಆರೋಪದಲ್ಲಿ ನೆಸ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾ ಮಾಡಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ನೆಸ್ಪ್ರೆಸ್ಸೊ ಸಿಇಒ ಫಿಲಿಪ್ ನರ್ವಟ್ಟಿಯವರನ್ನು ತೆರವಾದ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
"ನೇರ ಅಧೀನ ಸಹೋದ್ಯೋಗಿ ಜತೆ ರಹಸ್ಯ ಪ್ರೇಮ ಸಂಬಂಧ ಹೊಂದಿರುವ ಬಗ್ಗೆ ತನಿಖೆ ನಡೆಸಿದ ಬಳಿಕ ಇದು ನೆಸ್ಲೆಯ ವ್ಯವಹಾರ ಸಂಹಿತೆಯ ಉಲ್ಲಂಘನೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾ ಮಾಡಲಾಗಿದೆ" ಎಂದು ಸಂಸ್ಥೆ ಅಧಿಕೃತ ಹೇಳಿಕೆ ನೀಡಿದೆ.
ಅಧ್ಯಕ್ಷ ಪಾಲ್ ಬ್ಲೂಕ್ ಮತ್ತು ಮುಖ್ಯ ಸ್ವತಂತ್ರ ನಿರ್ದೇಶಕ ಪ್ಯಾಬ್ಲೋ ಇಸ್ಲಾ ಅವರ ಮೇಲ್ವಿಚಾರಣೆಯಲ್ಲಿ ಈ ತನಿಖೆ ನಡೆದಿದ್ದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.
"ಈ ನಿರ್ಧಾರ ಅಗತ್ಯವಾಗಿತ್ತು. ಮೌಲ್ಯಗಳು ಮತ್ತು ಆಡಳಿತ ನಮ್ಮ ಕಂಪನಿಯ ಆಧಾರಸ್ತಂಭಗಳು. ಲಾರೆನ್ಸ್ ಅವರ ಹಲವು ವರ್ಷಗಳ ಸೇವೆಗೆ ಧನ್ಯವಾದ ಹೇಳುತ್ತಿದ್ದೇವೆ" ಎಂದು ಬ್ಲೂಕ್ ವಿವರಿಸಿದ್ದಾರೆ.
ಫ್ರೀಕ್ಸ್ 1986ರಲ್ಲಿ ಕಂಪನಿಗೆ ಫ್ರಾನ್ಸ್ ನಲ್ಲಿ ಸೇರಿದ್ದರು. 2014ರವರೆಗೂ ಯೂರೋಪ್ ನ ಕಂಪನಿಯ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಿದ್ದರು. ಸಿಇಓ ಆಗಿ ಬಡ್ತಿ ಹೊಂದುವ ಮುನ್ನ ಲ್ಯಾಟಿನ್ ಅಮೆರಿಕ ವಿಭಾಗದ ಮುಖ್ಯಸ್ಥರಾಗಿದ್ದರು.







