ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಗೆ ವರ್ಗಾಯಿಸಲು ಮುಂದಾದ ಮಚಾದೊ; ಇದು ಸಾಧ್ಯವೇ?

(ಫೋಟೋ - ndtv.com)
ನ್ಯೂಯಾರ್ಕ್: ನೊಬೆಲ್ ಶಾಂತಿ ಪ್ರಶಸ್ತಿಯನ್ನು ಒಮ್ಮೆ ಘೋಷಿಸಿದ ಬಳಿಕ ಅದನ್ನು ವರ್ಗಾಯಿಸಲು, ಹಂಚಿಕೊಳ್ಳಲು ಅಥವಾ ರದ್ದುಪಡಿಸಲು ಯಾವುದೇ ಅವಕಾಶವಿಲ್ಲ ಎಂದು ನೊಬೆಲ್ ಸಮಿತಿ ಸ್ಪಷ್ಟಪಡಿಸಿದೆ.
ತಮಗೆ ಲಭಿಸಿರುವ 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ವೆನೆಝುವೆಲಾ ವಿರೋಧ ಪಕ್ಷದ ನಾಯಕಿ ಮರಿಯಾ ಕೊರಿನಾ ಮಚಾಡೊ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ಸಮಿತಿ ಈ ಸ್ಪಷ್ಟನೆ ನೀಡಿದೆ.
ನೊಬೆಲ್ ಪ್ರತಿಷ್ಠಾನದ ಶಾಸನಗಳ ಪ್ರಕಾರ, ನೊಬೆಲ್ ಪ್ರಶಸ್ತಿ ಮಂಜೂರು ಮಾಡುವ ನಿರ್ಧಾರ ಅಂತಿಮ ಹಾಗೂ ಶಾಶ್ವತವಾಗಿದ್ದು, ಈ ಸಂಬಂಧ ಯಾವುದೇ ಮೇಲ್ಮನವಿ ಅಥವಾ ಮನವಿಗಳಿಗೆ ಅವಕಾಶವಿಲ್ಲ ಎಂದು ಸಮಿತಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ. ಅಲ್ಲದೆ, ಪ್ರಶಸ್ತಿ ಸ್ವೀಕರಿಸಿದವರು ನಂತರ ನೀಡುವ ಹೇಳಿಕೆಗಳು ಅಥವಾ ಅವರ ಅಭಿಪ್ರಾಯಗಳ ಕುರಿತು ಸಮಿತಿ ಪ್ರತಿಕ್ರಿಯಿಸುವುದಿಲ್ಲ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
“ಒಮ್ಮೆ ನೊಬೆಲ್ ಪ್ರಶಸ್ತಿ ಘೋಷಿಸಿದ ಬಳಿಕ ಅದನ್ನು ರದ್ದುಪಡಿಸಲು, ಇತರರೊಂದಿಗೆ ಹಂಚಿಕೊಳ್ಳಲು ಅಥವಾ ವರ್ಗಾಯಿಸಲು ಅವಕಾಶವಿಲ್ಲ. ಈ ನಿರ್ಧಾರ ಅಂತಿಮವಾಗಿದ್ದು ಎಲ್ಲ ಕಾಲಕ್ಕೂ ಅನ್ವಯಿಸುತ್ತದೆ,” ಎಂದು ನೊಬೆಲ್ ಸಮಿತಿ ಹಾಗೂ ನೊಬೆಲ್ ಸಂಸ್ಥೆ ಸ್ಪಷ್ಟಪಡಿಸಿವೆ.
ಇದಕ್ಕೂ ಮುನ್ನ ಫಾಕ್ಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ನಿರೂಪಕ ಸಿಯಾನ್ ಹ್ಯಾನಿಟಿ, “ನಿಮಗೆ ದೊರೆತ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡುವ ಪ್ರಸ್ತಾವವಿದೆಯೇ?” ಎಂದು ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಮಚಾದೊ “ಅದು ಇನ್ನೂ ಸಂಭವಿಸಿಲ್ಲ” ಎಂದು ಉತ್ತರಿಸಿದ್ದರು.
ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಜತಾಂತ್ರಿಕ ಸಾಧನೆಗಳನ್ನು ಉಲ್ಲೇಖಿಸಿ, ನೊಬೆಲ್ ಶಾಂತಿ ಪ್ರಶಸ್ತಿಗೆ ತಾವು ಅರ್ಹರು ಎಂಬ ಅಭಿಪ್ರಾಯವನ್ನು ಪದೇಪದೇ ವ್ಯಕ್ತಪಡಿಸುತ್ತಿರುವುದು ಗಮನಾರ್ಹ.







