2023ರ ವರ್ಷದ ವಿಶ್ವಸಂಸ್ಥೆಯ ಪ್ರತಿಷ್ಠಿತ ʼಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಅವಾರ್ಡ್ʼಗೆ ಮೇಜರ್ ರಾಧಿಕಾ ಸೇನ್ ಆಯ್ಕೆ

Photo : dailyexcelsior.com
ವಿಶ್ವಸಂಸ್ಥೆ: ಶಾಂತಿಪಾಲನೆಗಾಗಿ ಮೀಸಲಿರುವ 2023ನೇ ಸಾಲಿನ ಪ್ರತಿಷ್ಠಿತ ವಿಶ್ವ ಸಂಸ್ಥೆ ʼಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಅವಾರ್ಡ್ʼಗೆ ಮೇಜರ್ ರಾಧಿಕಾ ಸೇನ್ ಭಾಜನರಾಗಿದ್ದಾರೆ.
ಅವರು ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ನಡೆಸಲಾಗಿದ್ದ ವಿಶ್ವಸಂಸ್ಥೆಯ ಸಂಘಟಿತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮೇ 30ರಂದು ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯಲಿರುವ ಶಾಂತಿಪಾಲಕರ ಅಂತಾರಾಷ್ಟ್ರೀಯ ದಿನಾಚರಣೆಯಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಈ ಪ್ರಶಸ್ತಿಯನ್ನು ಮೇಜರ್ ರಾಧಿಕಾ ಸೇನ್ ಅವರಿಗೆ ಪ್ರದಾನ ಮಾಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, “ಮೇಜರ್ ರಾಧಿಕಾ ಸೇನ್ ನೈಜ ನಾಯಕಿ ಹಾಗೂ ಆದರ್ಶಪ್ರಾಯರಾಗಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಮೇಜರ್ ರಾಧಿಕಾ ಸೇನ್ ಅವರು, ಮಾರ್ಚ್ 2023ರಿಂದ ಎಪ್ರಿಲ್ 2024ರವರೆಗೆ ಭಾರತೀಯ ಕ್ಷಿಪ್ರ ನಿಯೋಜನಾ ಪಡೆಯ ಕಾರ್ಯನಿರತ ತುಕಡಿಯ ಮುನುಸ್ಕೊ (MONUSCO) ಕಮಾಂಡರ್ ಆಗಿದ್ದರು ಎಂದು ವಿಶ್ವ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
1993ರಲ್ಲಿ ಹಿಮಾಚಲ ಪ್ರದೇಶದಲ್ಲಿ ಜನಿಸಿದ ಮೇಜರ್ ರಾಧಿಕಾ ಸೇನ್ ಅವರು, ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಯನ್ನು ಸೇರ್ಪಡೆಯಾಗಿದ್ದರು. ಜೈವಿಕ ತಂತ್ರಜ್ಞಾನದ ಪದವೀಧರೆಯಾದ ಅವರು, ಐಐಟಿ ಬಾಂಬೆಯಲ್ಲಿ ತಮ್ಮ ಸ್ನಾತಕೋತ್ತರ ಪದವಿಯ ವ್ಯಾಸಂಗ ಮಾಡುವಾಗ ಸಶಸ್ತ್ರ ಪಡೆಗಳನ್ನು ಸೇರ್ಪಡೆಯಾಗಲು ನಿರ್ಧರಿಸಿದ್ದರು.
2023ರಲ್ಲಿ ಅವರನ್ನು MONUSCO ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಅವರು ಎಪ್ರಿಲ್ 2024ರವರೆಗೆ ಭಾರತೀಯ ಕ್ಷಿಪ್ರ ನಿಯೋಜನೆ ಪಡೆಯ ಕಾರ್ಯನಿರತ ತುಕಡಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು.







