ಅಮೆರಿಕದ ಮಧ್ಯಂತರ ಚುನಾವಣಾ ಸೋಲಿನ ಬೆನ್ನಲ್ಲೇ ಟ್ರಂಪ್ ಆಡಳಿತದಲ್ಲಿ ಮೇಜರ್ ಸರ್ಜರಿ!
ಸೂಸಿ ವೈಲ್ಸ್ಗೆ ಕೊಕ್; ಆಪ್ತ ಸಹಾಯಕ ಸ್ಟೀಫನ್ ಮಿಲ್ಲರ್ಗೆ ಚೀಫ್ ಆಫ್ ಸ್ಟಾಫ್ ಪಟ್ಟ

Photo credit : ndtv
ವಾಷಿಂಗ್ಟನ್: ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ವೈಟ್ ಹೌಸ್ನ ಮುಖ್ಯ ಸಿಬ್ಬಂದಿ ಅಧಿಕಾರಿ (ಚೀಫ್ ಆಫ್ ಸ್ಟಾಫ್) ಸೂಸಿ ವೈಲ್ಸ್ ಅವರನ್ನು ಆ ಹುದ್ದೆಯಿಂದ ಬದಲಿಸಿ, ತಮ್ಮ ದೀರ್ಘಕಾಲದ ಆಪ್ತ ಸಹಾಯಕ ಸ್ಟೀಫನ್ ಮಿಲ್ಲರ್ ಅವರನ್ನು ನೇಮಿಸುವುದಾಗಿ ಘೋಷಿಸಿದ್ದಾರೆ.
ನ. 9ರ ಸೋಮವಾರದಿಂದ 41 ವರ್ಷದ ಮಿಲ್ಲರ್ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸದ್ಯ ಅವರು ಟ್ರಂಪ್ ಆಡಳಿತದಲ್ಲಿ ಉಪ ಮುಖ್ಯ ಸಿಬ್ಬಂದಿ ಅಧಿಕಾರಿ ಹಾಗೂ ದೇಶೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹುದ್ದೆಯಿಂದ ನಿರ್ಗಮಿಸಲಿರುವ ಸೂಸಿ ವೈಲ್ಸ್ ಅವರನ್ನು ಟ್ರಂಪ್ ಅವರ ರಾಜಕೀಯ ಕಾರ್ಯಾಚರಣೆ ವಿಭಾಗಕ್ಕೆ ವರ್ಗಾಯಿಸಲಾಗಿದ್ದು, ಅಧ್ಯಕ್ಷರ ಆಪ್ತ ವಲಯದಲ್ಲಿಯೇ ಮುಂದುವರಿಯಲಿದ್ದಾರೆ.
ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ 'ಟ್ರುತ್ ಸೋಶಿಯಲ್'ನಲ್ಲಿ ಈ ನೇಮಕವನ್ನು ಪ್ರಕಟಿಸಿದ್ದಾರೆ. 'ನನ್ನ ಅತ್ಯಂತ ವಿಶ್ವಾಸಾರ್ಹ ಸಲಹೆಗಾರರಲ್ಲಿ ಒಬ್ಬರಾದ ಸ್ಟೀಫನ್ ಮಿಲ್ಲರ್ ಅವರು ನವೆಂಬರ್ 9, 2026ರಿಂದ ಚೀಫ್ ಆಫ್ ಸ್ಟಾಫ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೂಸಿ ವೈಲ್ಸ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹುದ್ದೆಯಲ್ಲಿ ಅವರು ಸಲ್ಲಿಸಿರುವ ಸೇವೆಗೆ ಧನ್ಯವಾದ ಅರ್ಪಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ.
ವೈಟ್ ಹೌಸ್ನ ಮೊದಲ ಮಹಿಳಾ ಮುಖ್ಯ ಸಿಬ್ಬಂದಿ ಅಧಿಕಾರಿ :
2024ರ ಅಧ್ಯಕ್ಷೀಯ ಚುನಾವಣೆಯ ಬಳಿಕ ಟ್ರಂಪ್ ನೇಮಿಸಿದ ಮೊದಲ ವ್ಯಕ್ತಿ ಸೂಸಿ ವೈಲ್ಸ್. ವೈಟ್ ಹೌಸ್ ನ ಚೀಫ್ ಆಫ್ ಸ್ಟಾಫ್ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಇತಿಹಾಸವನ್ನೂ ಅವರು ನಿರ್ಮಿಸಿದ್ದರು.
ತಮ್ಮ ನಿರ್ಗಮನದ ಕುರಿತು ಹೇಳಿಕೆ ನೀಡಿರುವ ವೈಲ್ಸ್, 'ವೈಟ್ ಹೌಸ್ನಲ್ಲಿ ಅಧ್ಯಕ್ಷ ಟ್ರಂಪ್ ಅವರಿಗೆ ಸೇವೆ ಸಲ್ಲಿಸಿದ್ದು ನನ್ನ ಜೀವನದ ಅತ್ಯಂತ ಗೌರವದ ಸಂಗತಿ. ಚೀಫ್ ಆಫ್ ಸ್ಟಾಫ್ ಆಗಿ ಇಂದೇ ನನ್ನ ಕೊನೆಯ ದಿನ' ಎಂದು ತಿಳಿಸಿದ್ದಾರೆ.
'ಗಡಿಯನ್ನು ಭದ್ರಪಡಿಸುವುದು, ತೆರಿಗೆ ಕಡಿತಗೊಳಿಸುವುದು, ಆರ್ಥಿಕತೆಯನ್ನು ಬಲಪಡಿಸುವುದು ಮತ್ತು' ಅಮೆರಿಕ ಫಸ್ಟ್' ನೀತಿಯನ್ನು ಅನುಷ್ಠಾನಗೊಳಿಸುವುದು ಸೇರಿದಂತೆ ನಾವು ಒಟ್ಟಾಗಿ ಸಾಧಿಸಿದ ಕಾರ್ಯಗಳ ಭಾಗವಾಗಿದ್ದಕ್ಕೆ ಹೆಮ್ಮೆಯಿದೆ' ಎಂದು ಹೇಳಿದ್ದಾರೆ.
ಅಧ್ಯಕ್ಷ ಟ್ರಂಪ್ ಮತ್ತು ಅವರ ಉದ್ದೇಶದ ಬಗೆಗಿನ ತಮ್ಮ ಬದ್ಧತೆ ಮುಂದುವರಿಯಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರ ಎರಡನೇ ಅಧ್ಯಕ್ಷೀಯ ಅವಧಿಯಲ್ಲಿ ಅತಿ ಹೆಚ್ಚು ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿ ವೈಲ್ಸ್. ಆದರೆ, ಅವರ ಮೊದಲ ನಾಲ್ಕು ವರ್ಷಗಳ ಅಧ್ಯಕ್ಷೀಯ ಅವಧಿಯಲ್ಲಿ ನಾಲ್ವರು ಬೇರೆ ಬೇರೆ ವ್ಯಕ್ತಿಗಳು ಚೀಫ್ ಆಫ್ ಸ್ಟಾಫ್ ಆಗಿ ಕಾರ್ಯನಿರ್ವಹಿಸಿದ್ದರು.
ಸಂಪುಟ ಪುನರ್ರಚನೆಗೂ ಸಿದ್ಧತೆ? :
ಮಧ್ಯಂತರ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಆಡಳಿತದಲ್ಲಿ ಇನ್ನಷ್ಟು ಮಹತ್ವದ ಬದಲಾವಣೆಗಳಾಗಬಹುದು ಎಂಬ ವರದಿಗಳ ನಡುವೆಯೇ ಮಿಲ್ಲರ್ ನೇಮಕದ ಘೋಷಣೆ ಹೊರಬಿದ್ದಿದೆ.
ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು 2028ರ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಹುದ್ದೆ ತೊರೆಯಬಹುದು ಎಂದೂ ಕೆಲವು ವರದಿಗಳು ತಿಳಿಸಿವೆ.
ಆದರೆ, ರೂಬಿಯೊ ಅವರ ನಿರ್ಗಮನದ ಕುರಿತ ವರದಿಯನ್ನು ಅಮೆರಿಕದ ವಿದೇಶಾಂಗ ಇಲಾಖೆ ನಿರಾಕರಿಸಿದೆ. ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಇದನ್ನು 'ಸಂಪೂರ್ಣ ಆಧಾರರಹಿತ ಸುಳ್ಳು ಸುದ್ದಿ' ಎಂದು ಕರೆದಿದ್ದಾರೆ.
ವಲಸೆ ನೀತಿಯ ಪ್ರಮುಖ ರೂವಾರಿ ಮಿಲ್ಲರ್ :
41 ವರ್ಷದ ಸ್ಟೀಫನ್ ಮಿಲ್ಲರ್ ಅವರು ಟ್ರಂಪ್ ಅವರ ಅತ್ಯಂತ ಆಪ್ತ ಹಾಗೂ ದೀರ್ಘಕಾಲದ ಸಹಾಯಕರಲ್ಲಿ ಒಬ್ಬರು. ಟ್ರಂಪ್ ಅವರ ವಲಸೆ ನೀತಿಯೊಂದಿಗೆ ನಿಕಟವಾಗಿ ಕೆಲಸ ಮಾಡಿರುವ ಅವರು, ಆಡಳಿತದ ಪ್ರಮುಖ ನೀತಿ ನಿರೂಪಕರಾಗಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾಷಣ ಬರಹಗಾರರಾಗಿ ಟ್ರಂಪ್ ತಂಡ ಸೇರಿದ್ದ ಮಿಲ್ಲರ್, ಬಳಿಕ ಆಡಳಿತದಲ್ಲಿ ಉಪ ಮುಖ್ಯ ಸಿಬ್ಬಂದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಜನವರಿಯಲ್ಲಿ ವಲಸೆ ಜಾರಿ ಏಜೆಂಟರು ಇಬ್ಬರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದ ಘಟನೆಯ ಬಳಿಕ ಮಿಲ್ಲರ್ ಟೀಕೆಗೆ ಗುರಿಯಾಗಿದ್ದರು.
ಟ್ರಂಪ್ ಅವರ ತಂಡ ಸೇರುವುದಕ್ಕೂ ಮುನ್ನ ಅವರು ಅಲಬಾಮಾದ ಮಾಜಿ ರಿಪಬ್ಲಿಕನ್ ಸೆನೆಟರ್ ಜೆಫ್ ಸೆಷನ್ಸ್ ಅವರೊಂದಿಗೆ ಕೆಲಸ ಮಾಡಿದ್ದರು. ಸೆಷನ್ಸ್ ಅವರು ಬಳಿಕ ಟ್ರಂಪ್ ಆಡಳಿತದಲ್ಲಿ ಮೊದಲ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
'ಮಿಲ್ಲರ್ ಅದ್ಭುತ ದೇಶಭಕ್ತ': ವ್ಯಾನ್ಸ್
ಮಿಲ್ಲರ್ ಅವರ ನೇಮಕಕ್ಕೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, 'ಸೂಸಿ ವೈಲ್ಸ್ ಅವರು ಅಧ್ಯಕ್ಷ ಟ್ರಂಪ್ ಮತ್ತು ದೇಶಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಶ್ಲಾಘಿಸುತ್ತೇನೆ. ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಸ್ಟೀಫನ್ ಮಿಲ್ಲರ್ ಒಬ್ಬ ಉತ್ತಮ ದೇಶಭಕ್ತ. ಅವರು ಹೊಸ ಹುದ್ದೆಯಲ್ಲಿಯೂ ಉತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಬಡ್ತಿ ಪಡೆದಿರುವ ಅವರಿಗೆ ಅಭಿನಂದನೆಗಳು' ಎಂದು ತಿಳಿಸಿದ್ದಾರೆ.






