ಮಡ್ಡಲೇನಾ ಮೇಲೆ ಪಾರಮ್ಯ ಸಾಧಿಸಿ ಯುಎಫ್ಸಿ ವೆಲ್ಟರ್ ವೆಯ್ಟ್ ಬೆಲ್ಟ್ ತಮ್ಮದಾಗಿಸಿಕೊಂಡ ಇಸ್ಲಾಂ ಮಖಚೇವ್

Photo Credit : aljazeera.com
ನ್ಯೂಯಾರ್ಕ್: ಮ್ಯಾಡಿಸನ್ ಗಾರ್ಡನ್ ಸ್ಕೇರ್ ನಲ್ಲಿ ನಡೆದ ಯುಎಫ್ಸಿ ವೆಲ್ಟರ್ ವೆಯ್ಟ್ ಚಾಂಪಿಯನ್ ಶಿಪ್ ನಲ್ಲಿ ಜಾಕ್ ಡೆಲ್ಲಾ ಮಡ್ಡಲೇನಾರನ್ನು ಐದು ಸುತ್ತಿನ ಹೋರಾಟದಲ್ಲಿ ಏಕಪಕ್ಷೀಯವಾಗಿ ಮಣಿಸುವ ಮೂಲಕ, ಇಸ್ಲಾಂ ಮಖಚೇವ್ ಸರ್ವಾನುಮತದ ಗೆಲುವಿನ ತೀರ್ಪಿನೊಂದಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮತ್ತೊಂದು ಸಹ ಮುಖ್ಯ ಪಂದ್ಯದಲ್ಲಿ ಫ್ಲೈವೇಟ್ ವಿಭಾಗದ ಪ್ರಶಸ್ತಿಯನ್ನು ವ್ಯಾಲೆಂಟಿನಾ ಶೆವ್ಚೆಂಕೊ ತಮ್ಮ ಬಳಿಯೇ ಉಳಿಸಿಕೊಂಡರು.
ಲೈಟ್ ವೆಯ್ಟ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ, ಹೊಸ ಸವಾಲಿಗೆ ಸನ್ನದ್ಧರಾಗಿದ್ದ ಮಖಚೇವ್, ತಮ್ಮ ಆಸ್ಟ್ರೇಲಿಯಾ ಎದುರಾಳಿ ಜಾಕ್ ಡೆಲ್ಲಾ ಮಡ್ಡಲೇನಾರೊದಿಗೆ ನಡೆದ 25 ನಿಮಿಷಗಳ ಹೋರಾಟದಲ್ಲಿ ಅಕ್ಷರಶಃ ಪಾರಮ್ಯ ಸಾಧಿಸಿದರು. ಆ ಮೂಲಕ ಶನಿವಾರ ರಾತ್ರಿ ಸತತ 16ನೇ ಯುಎಫ್ಸಿ ಗೆಲುವನ್ನು ದಾಖಲಿಸಿದರು.
ತಮ್ಮ 29 ವರ್ಷದ ಎದುರಾಳಿ ಜಾಕ್ ಡೆಲ್ಲಾ ಮಡ್ಡಲೇನಾರ ಮೇಲೆ 34 ವರ್ಷದ ಮಖಚೇವ್ ತಡೆರಹಿತ ದಾಳಿಯನ್ನು ನಡೆಸುವುದಕ್ಕೂ ಮುನ್ನ, ಅವರ ಮೇಲೆ ಲಘು ಪ್ರಹಾರವನ್ನು ನಡೆಸಿದರು. ಅವರ ತೀಕ್ಷ್ಣ ದಾಳಿಯೆದುರು ನಿರುತ್ತರರಾದ ಮಡ್ಡಲೇನಾ, ದೀರ್ಘ ಕಾಲ ತೀವ್ರ ಒತ್ತಡದಲ್ಲಿ ನೆಲದ ಮೇಲೆ ಕುಸಿದು ಬಿದ್ದಿದ್ದರು.
ಮಖಚೇವ್ ರ ಪ್ರಹಾರಗಳಿಗೆ ಎಲ್ಲ ಮೂವರು ತೀರ್ಪುಗಾರರು 50-45 ಅಂಕಗಳನ್ನು ನೀಡುವ ಮೂಲಕ, ಯುಎಫ್ಸಿ ಇತಿಹಾಸದಲ್ಲಿ ಅವರು ಎರಡು ವಿಭಿನ್ನ ತೂಕದ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ 11ನೇ ಕುಸ್ತಿ ಪಟು ಎಂಬ ಕೀರ್ತಿಗೆ ಭಾಜನರಾದರು.
ಪಂದ್ಯದ ನಂತರ ಮಾತನಾಡಿದ ಇಸ್ಲಾಂ ಮಖಚೇವ್, “ಇದು ನನ್ನ ಯೋಜನೆಯಾಗಿತ್ತು ಹಾಗೂ ಇದು ಗೋಪ್ಯವಾಗಿಯೇನೂ ಇರಲಿಲ್ಲ. ಇದು ನನ್ನ ಎಲ್ಲ ಪ್ರತಿಸ್ಪರ್ಧಿಗಳಿಗೂ ತಿಳಿದಿದ್ದು, ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ” ಎಂದು ಹೇಳಿಕೊಂಡರು.
ಮತ್ತೊಂದು ಸಹ ಪ್ರಮುಖ ಪಂದ್ಯದಲ್ಲಿ ಡಬಲ್ ಚಾಂಪಿಯನ್ ಶಿಪ್ ನ ಎಲೈಟ್ ಗುಂಪಿಗೆ ಸೇರ್ಪಡೆಯಾಗುವ ಝಾಂಗ್ ವೀಲಿಯ ಕನಸನ್ನು ವ್ಯಾಲೆಂಟಿನಾ ಶೆವ್ಚೆಂಕೊ ಭಗ್ನಗೊಳಿಸಿದರು. ಈ ಪಂದ್ಯದಲ್ಲಿ ಏಪಕ್ಷೀಯ ಪಾರಮ್ಯ ಪ್ರದರ್ಶಿಸಿದ ವ್ಯಾಲೆಂಟಿನಾ ಶೆವ್ಚೆಂಕೊ, ಫ್ಲೈವೆಯ್ಟ್ ವಿಭಾಗದ ಪ್ರಶಸ್ತಿಯನ್ನು ತಮ್ಮ ಬಳಿಯೇ ಉಳಿಸಿಕೊಂಡರು.
ಝಾಂಗ್ ವಿರುದ್ಧ 50-45 ಅಂಕಗಳ ಮುನ್ನಡೆ ಸಾಧಿಸುವ ಮೂಲಕ, ಶೆವ್ ಚೆಂಕೊ (26-4-1) ತಮ್ಮ 11ನೇ ಸರ್ವಾಂಗೀಣ ಪ್ರಶಸ್ತಿಯನ್ನು ಬಾಚಿಕೊಂಡರು.







