ಭಾಗವತ್ ಕಾರ್ಯಕ್ರಮಕ್ಕೆ ಮಮ್ದಾನಿ ವಿರೋಧ : “ನಾನು ಬೆಂಬಲಿಸುವುದಿಲ್ಲ” ಎಂದ ನ್ಯೂಯಾರ್ಕ್ ಮೇಯರ್

ಝೊಹ್ರಾನ್ ಮಮ್ದಾನಿ | ಮೋಹನ್ ಭಾಗವತ್ Photo: x.com/WIONews
ವಾಷಿಂಗ್ಟನ್ : ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಲಿರುವ ಸಮಾವೇಶವನ್ನು ತಾನು ಬೆಂಬಲಿಸುವುದಿಲ್ಲ ಎಂದು ನ್ಯೂಯಾರ್ಕ್ ಸಿಟಿ ಮೇಯರ್ ಝೊಹ್ರಾನ್ ಮಮ್ದಾನಿ ಹೇಳಿದ್ದಾರೆ. ಆದರೆ, ಈ ಖಾಸಗಿ ಕಾರ್ಯಕ್ರಮವನ್ನು ರದ್ದುಗೊಳಿಸಲು ನಗರ ಆಡಳಿತಕ್ಕೆ ಕಾನೂನಾತ್ಮಕ ಅಧಿಕಾರವಿದೆಯೇ ಎಂಬುದು ತನಗೆ ತಿಳಿದಿಲ್ಲ ಎಂದಿದ್ದಾರೆ.
ಆರೆಸ್ಸೆಸ್ಸ್ನ ಶತಮಾನೋತ್ಸವ ವರ್ಷದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಮೋಹನ್ ಭಾಗವತ್ ಅವರು ಆಗಸ್ಟ್ 29ರಂದು ನ್ಯೂಯಾರ್ಕ್ನ ಪ್ರತಿಷ್ಠಿತ ಮ್ಯಾಡಿಸನ್ ಸ್ಕ್ವೇರ್ನಲ್ಲಿ ಸುಮಾರು 5,000 ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮ್ದಾನಿ, "ನಾನು ಈ ಸಮಾವೇಶವನ್ನು ಬೆಂಬಲಿಸುವುದಿಲ್ಲ. ಆದರೆ ಖಾಸಗಿ ಕಾರ್ಯಕ್ರಮವೊಂದನ್ನು ರದ್ದುಗೊಳಿಸುವ ಅಧಿಕಾರ ನಗರ ಆಡಳಿತಕ್ಕೆ ಇದೆಯೇ ಎಂಬುದು ನನಗೆ ತಿಳಿದಿಲ್ಲ" ಎಂದಿದ್ದಾರೆ. ಆರೆಸ್ಸೆಸ್, ನಿಗದಿತ ಸಮಾವೇಶ ಮತ್ತು ಭಾಗವತ್ ಅವರ ಭೇಟಿಗೆ ವ್ಯಕ್ತವಾಗುತ್ತಿರುವ ಪ್ರತಿಭಟನೆಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ನ್ಯೂಯಾರ್ಕ್ ನಗರದ ಇತಿಹಾಸದಲ್ಲೇ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗಿರುವ ಮಮ್ದಾನಿ, ತಮ್ಮ ಈ ನಿಲುವಿಗೆ ಕೌಟುಂಬಿಕ ಹಿನ್ನೆಲೆಯೂ ಕಾರಣ ಎಂದು ತಿಳಿಸಿದ್ದಾರೆ.
"ನಮ್ಮ ನಗರದ ಇತಿಹಾಸದಲ್ಲೇ ಮೊದಲ ಭಾರತೀಯ-ಅಮೆರಿಕನ್ ಮೇಯರ್ ಆಗಿ ನಾನು ಇಲ್ಲಿ ನಿಂತಿದ್ದೇನೆ. ನನ್ನ ತಾಯಿಯ ಕುಟುಂಬದವರೆಲ್ಲರೂ ಇನ್ನೂ ಭಾರತದಲ್ಲೇ ಇದ್ದಾರೆ” ಎಂದು ತಿಳಿಸಿದ ಅವರು, “ನನ್ನ ಕುಟುಂಬ ನನಗೆ ಕಲಿಸಿದ ಮತ್ತು ನಾನು ನೋಡಿ ಬೆಳೆದ ಭಾರತದ ದೃಷ್ಟಿಕೋನವೆಂದರೆ ಅದು ಭಾರತದ ಪ್ರತಿಯೊಬ್ಬ ವ್ಯಕ್ತಿಯ ಅಸ್ತಿತ್ವವನ್ನು ಗೌರವಿಸುವ ಬಹುತ್ವದ ಸಮಾಜ ಮತ್ತು ಜಾತ್ಯತೀತ ಗಣರಾಜ್ಯವಾಗಿದೆ" ಎಂದು ಅವರು ಹೇಳಿದ್ದಾರೆ.
ಇತರರನ್ನು ಹೊರಗಿಡುವಂತಹ ರಾಜಕೀಯ ಸಿದ್ಧಾಂತದ ಬೆಳವಣಿಗೆಯನ್ನು ನೋಡುವುದು ತೀವ್ರ ಕಳವಳಕಾರಿಯಾಗಿದೆ ಎಂದಿರುವ ಮಮ್ದಾನಿ, "ಕೇವಲ ಒಬ್ಬ ಭಾರತೀಯ-ಅಮೆರಿಕನ್ ಆಗಿ ಮಾತ್ರವಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ ಸಮಾನತೆಯನ್ನು ಪ್ರತಿಪಾದಿಸುವ ನ್ಯೂಯಾರ್ಕ್ ನಗರದ ಮೇಯರ್ ಆಗಿಯೂ ನಾನು ಇದನ್ನು ಬಲವಾಗಿ ವಿರೋಧಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
ಭಾಗವತ್ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ
ಭಾಗವತ್ ಅವರ ಈ ಭೇಟಿಗೆ ಅಮೆರಿಕದ ಹಲವಾರು ಸರ್ವಧರ್ಮೀಯ ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಮತ್ತು ಇಂಟರ್ಫೇತ್ ಸೆಂಟರ್ ಆಫ್ ನ್ಯೂಯಾರ್ಕ್ ಸೇರಿದಂತೆ ಹಲವು ಸಂಘಟನೆಗಳು ನ್ಯೂಯಾರ್ಕ್ ಸಿಟಿ ಹಾಲ್ ಎದುರು ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿವೆ.
ಆರೆಸ್ಸೆಸ್ ನ ಶತಮಾನೋತ್ಸವ ಕಾರ್ಯಕ್ರಮಗಳ ಭಾಗವಾಗಿ ಭಾಗವತ್ ಮಂಗಳವಾರ ಅಮೆರಿಕಕ್ಕೆ ಆಗಮಿಸಿದ್ದಾರೆ. ಸಂಘದ ಶತಮಾನೋತ್ಸವದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಭಾಗವತ್ ಅವರು ಅಮೆರಿಕ ಸೇರಿದಂತೆ ಕೆನಡಾ ಮತ್ತು ಯುಕೆ ದೇಶಗಳಿಗೂ ಪ್ರವಾಸ ಕೈಗೊಳ್ಳಲಿದ್ದಾರೆ.






