ಆಯಸ್ಕಾಂತ ಶಕ್ತಿಗೆ ಒಮ್ಮೆಲೇ ಎಳೆದುಕೊಂಡ MRI ಯಂತ್ರ; ಕೊರಳಿನಲ್ಲಿ ಲೋಹದ ಸರ ಧರಿಸಿ ಯಂತ್ರವಿದ್ದ ಕೋಣೆಗೆ ಪ್ರವೇಶಿಸಿದ ವ್ಯಕ್ತಿ ಮೃತ್ಯು!

Photo : AI
ಲಾಂಗ್ ಐಲ್ಯಾಂಡ್ (ನ್ಯೂಯಾರ್ಕ್): ಅಮೆರಿಕದ ಲಾಂಗ್ ಐಲ್ಯಾಂಡ್ ನ MRI ಕೇಂದ್ರದಲ್ಲಿ ಬುಧವಾರ ಸಂಭವಿಸಿದ ದುರ್ಘಟನೆಯೊಂದರಲ್ಲಿ, 61 ವರ್ಷದ ವ್ಯಕ್ತಿಯೊಬ್ಬರು ಕೊರಳಿನಲ್ಲಿದ್ದ ಸರದಿಂದಾಗಿ MRI ಯಂತ್ರದ ಆಯಸ್ಕಾಂತ ಶಕ್ತಿಗೆ ಎಳೆಯಲ್ಪಟ್ಟು ಮೃತಪಟ್ಟಿದ್ದಾರೆ. ಈ ಘಟನೆಯು ವೈದ್ಯಕೀಯ ಕ್ಷೇತ್ರದಲ್ಲಿ MRI ಸುರಕ್ಷತಾ ನಿಯಮಗಳ ಪಾಲನೆಯ ಅಗತ್ಯತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
NBC New York ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಕೊರಳಿನಲ್ಲಿ ದೊಡ್ಡ ಗಾತ್ರದ ಸರವನ್ನು ಧರಿಸಿದ್ದ ವ್ಯಕ್ತಿಯು MRI ಕೊಠಡಿಯನ್ನು ಪ್ರವೇಶಿಸಿದಾಗ, MRI ಯಂತ್ರ ಅದಾಗಲೇ ಸಕ್ರಿಯವಾಗಿತ್ತು ಎನ್ನಲಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, MRI ಕೊಠಡಿಯನ್ನು ಪ್ರವೇಶಿಸದಂತೆ ಆ ವ್ಯಕ್ತಿಗೆ ಎಚ್ಚರಿಕೆ ನೀಡಿದರೂ, ಸಂಬಂಧಿಯೊಬ್ಬರ ಕೂಗಾಟವನ್ನು ಕೇಳಿದ ಅವರು, ಆ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಕೊಠಡಿಯೊಳಗೆ ನುಗ್ಗಿದರು ಎನ್ನಲಾಗಿದೆ.
MRI ಕೋಣೆಗೆ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಅವರ ಕೊರಳಿನಲ್ಲಿದ್ದ ಸರ ಯಂತ್ರದ ಆಯಸ್ಕಾಂತೀಯ ಆಕರ್ಷಣೆಗೆ ಒಳಗಾಗಿ ಒಮ್ಮೆಲೇ ಎಳೆಯಲ್ಪಟ್ಟಿತು. ಇದರಿಂದಾಗಿ ಅವರ ದೇಹ ಕೂಡ ಯಂತ್ರದತ್ತ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಮರುದಿನ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
MRI ಯಂತ್ರಗಳು ಮ್ಯಾಗ್ನೆಟಿಕ್ ರೆಸೋನೆನ್ಸ್ ತಂತ್ರಜ್ಞಾನವನ್ನು ಬಳಸಿ ದೇಹದ ಆಂತರಿಕ ಅವಯವಗಳ ನಿಖರ ಚಿತ್ರಣವನ್ನು ನೀಡುತ್ತವೆ. ಆದರೆ ಈ ಪ್ರಕ್ರಿಯೆ ಪ್ರಬಲ ಮತ್ತು ಸ್ಥಿರ ಆಯಸ್ಕಾಂತೀಯ ಕ್ಷೇತ್ರಗಳ ಬಳಕೆಯನ್ನು ಅವಲಂಬಿಸಿರುತ್ತದೆ. ಈ ಶಕ್ತಿಯು ಸುತ್ತಲಿನ ಲೋಹೀಯ ವಸ್ತುಗಳನ್ನು ವೇಗವಾಗಿ ಆಕರ್ಷಿಸುವ ಗುಣವನ್ನು ಹೊಂದಿದ್ದು, ಸರಿಯಾದ ಮುನ್ನೆಚ್ಚರಿಕೆಗಳಿಲ್ಲದಿದ್ದರೆ ಅದು ಮಾರಕವಾಗಬಹುದು.
"ಕೊರಳಿನಲ್ಲಿದ್ದ ಸರವು ಟಾರ್ಪಿಡೋವಿನಂತೆ MRI ಯಂತ್ರದ ಆಯಸ್ಕಾಂತ ಕೇಂದ್ರದತ್ತ ಎಳೆಯಿತು. ಇದು ಶಾರೀರಿಕ ಹಾನಿಗೆ ಕಾರಣವಾಯಿತು. MRI ಯನ್ನು ಸುತ್ತುವರಿದಿರುವ ಸುರಕ್ಷತಾ ಕ್ರಮಗಳ ತೀವ್ರತೆಯನ್ನು ಈ ಘಟನೆ ಎತ್ತಿ ತೋರಿಸುತ್ತದೆ", ಎಂದು ನಾರ್ತ್ ಶೋರ್ ಯೂನಿವರ್ಸಿಟಿ ಆಸ್ಪತ್ರೆಯ ಇಮೇಜಿಂಗ್ ಸೇವೆಗಳ ನಿರ್ದೇಶಕ ಡಾ. ಚಾರ್ಲ್ಸ್ ವಿಂಟರ್ಫೆಲ್ಡ್ ಹೇಳಿದರು.
ಈ ರೀತಿಯ ಪ್ರಕರಣಗಳು ಇದೇ ಮೊದಲಲ್ಲ. ಈ ರೀತಿಯ ಅಪಘಾತಗಳು ಅಪರೂಪವಾದರೂ ಇತಿಹಾಸದಲ್ಲಿ ಕೆಲವೊಂದು ಗಂಭೀರ ಘಟನೆಗಳು ನಡೆದಿವೆ.
2001ರಲ್ಲಿ ನ್ಯೂಯಾರ್ಕ್ ನಲ್ಲಿ ಆರು ವರ್ಷದ ಬಾಲಕನೊಬ್ಬ MRI ಯಂತ್ರದೊಳಗೆ ಸಾವಿಗೀಡಾದನು. 2018ರಲ್ಲಿ ಭಾರತದಲ್ಲಿ ವ್ಯಕ್ತಿಯೊಬ್ಬರು ಇದೇ ರೀತಿ ಮೃತರಾದರು. 2023ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನರ್ಸ್ ಒಬ್ಬರು MRI ಯಂತ್ರಕ್ಕೆ ಎಳೆಯಲ್ಪಟ್ಟು ಮೃತಪಟ್ಟಿದ್ದರು.







