ಪೋಪ್ ಬಗ್ಗೆ ಟೀಕೆ, ಇರಾನ್ ಮೇಲಿನ ಯುದ್ಧದ ಬಳಿಕ ಟ್ರಂಪ್ ಮಾನಸಿಕ ಸ್ಥಿತಿಗತಿ ಬಗ್ಗೆ ಅಮೆರಿಕದ ಜನರಲ್ಲಿ ಕಳವಳವಿದೆ: Reuters/Ipsos ಸಮೀಕ್ಷೆ

ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇರಾನ್ ಮೇಲಿನ ಯುದ್ಧ ಮತ್ತು ಪೋಪ್ ಲಿಯೋ ಅವರೊಂದಿಗಿನ ಭಿನ್ನಾಭಿಪ್ರಾಯದ ಹಿನ್ನೆಲೆ ಅಮೆರಿಕದಲ್ಲಿ ಅನೇಕ ಜನರು ಟ್ರಂಪ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಪ್ರಶ್ನಿಸಿದ್ದಾರೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಅನುಮೋದನೆ ರೇಟಿಂಗ್ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು Reuters/Ipsos ಸಮೀಕ್ಷೆ ಪತ್ತೆ ಹಚ್ಚಿದೆ.
ಆರು ದಿನಗಳ ಕಾಲ ನಡೆದ ಈ ಸಾರ್ವಜನಿಕ ಅಭಿಪ್ರಾಯ ಸಮೀಕ್ಷೆ ಸೋಮವಾರ ಪೂರ್ಣಗೊಂಡಿದ್ದು, ಕೇವಲ 36% ಅಮೆರಿಕನ್ನರು ಮಾತ್ರ ಟ್ರಂಪ್ ಅವರ ಕಾರ್ಯಕ್ಷಮತೆಯನ್ನು ಅನುಮೋದಿಸಿದ್ದಾರೆ. 2025ರ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ ಆರಂಭಿಕ ಅವಧಿಯಲ್ಲಿ ಟ್ರಂಪ್ ಅವರಿಗೆ 47% ಅನುಮೋದನೆ ದೊರೆತಿದ್ದು ಅದು ಈ ಅವಧಿಯಲ್ಲಿ ಅವರು ಪಡೆದ ಗರಿಷ್ಠ ಮಟ್ಟವಾದ ಅನುಮೋದನೆಯಾಗಿತ್ತು.
ಇರಾನ್ ಮೇಲಿನ ಯುದ್ಧದ ನಂತರ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳವಾದ್ದರಿಂದ ಡೊನಾಲ್ಡ್ ಟ್ರಂಪ್ ಒತ್ತಡದಲ್ಲಿದ್ದಾರೆ. ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ದಾಳಿಯನ್ನು ಸುಮಾರು 36% ಅಮೆರಿಕನ್ನರು ಅನುಮೋದಿಸಿದ್ದಾರೆ. ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಕೆಲವು ಸದಸ್ಯರು ಸೇರಿದಂತೆ ಅನೇಕ ಅಮೆರಿಕನ್ನರು, 79 ವರ್ಷದ ಟ್ರಂಪ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಕೆಲವು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.
ಕೇವಲ 26% ಅಮೆರಿಕನ್ನರು ಮಾತ್ರ ಟ್ರಂಪ್ ಅವರನ್ನು "ಶಾಂತ ಸ್ವಭಾವದವ" ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಕಂಡುಬಂದಿದೆ. 53% ಮಂದಿ ಅವರನ್ನು ʼಶಾಂತ ಸ್ವಭಾವದವʼರು ಎಂದು ಹೇಳಿದ್ದಾರೆ. ಆದರೆ 46% ಮಂದಿ ಟ್ರಂಪ್ ಶಾಂತ ಸ್ವಭಾವದವರಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಇತ್ತೀಚೆಗೆ ಟ್ರಂಪ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಇರಾನ್ ನಾಗರಿಕತೆಯನ್ನು ಅಳಿಸಿಹಾಕುವ ಬೆದರಿಕೆಯನ್ನು ಹಾಕಿದ್ದರು. ಪೋಪ್ ಲಿಯೋ ಅವರನ್ನು ಟೀಕಿಸಿದ್ದರು. ಟ್ರಂಪ್ ಇರಾನ್ನ ಎಲ್ಲಾ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಅಮೆರಿಕದಲ್ಲೇ ವಿರೋಧ ವ್ಯಕ್ತವಾಗಿತ್ತು.






