ಇರಾನ್ನಲ್ಲಿ ಆಯತುಲ್ಲಾ ಆಲಿ ಖಾಮಿನೈ ಬಳಿಕ ಯಾರು ಅಧಿಕಾರ ವಹಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ: ಮಾರ್ಕೊ ರೂಬಿಯೊ

ಆಯತುಲ್ಲಾ ಆಲಿ ಖಾಮಿನೈ( X \ @khamenei_ir) , ಮಾರ್ಕೊ ರೂಬಿಯೊ (AP \ PTI)
ವಾಷಿಂಗ್ಟನ್, ಜ.29: ಇರಾನಿನ ಪರಮೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈಯನ್ನು ಅಧಿಕಾರದಿಂದ ತೆಗೆದು ಹಾಕಿದರೆ ಯಾರು ಅಧಿಕಾರ ನಿರ್ವಹಿಸುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಗುರುವಾರ ಹೇಳಿದ್ದಾರೆ.
ಇರಾನಿನಲ್ಲಿ ಮುಂದೆ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇಂತಹ ಸನ್ನಿವೇಶವು ಅಸಾಮಾನ್ಯವಾಗಿ ಸಂಕೀರ್ಣವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ ಅವರು , ಈ ಪ್ರದೇಶದಲ್ಲಿ ಅಮೆರಿಕಾದ ಸಿಬ್ಬಂದಿಗಳನ್ನು ಮತ್ತು ಮಿತ್ರರಾಷ್ಟ್ರಗಳ ಸೌಲಭ್ಯಗಳನ್ನು ರಕ್ಷಿಸಲು ಪೂರ್ವಭಾವಿ ಮಿಲಿಟರಿ ಕ್ರಮದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ. ಸಂಸತ್ತಿನ ವಿದೇಶಾಂಗ ಸಂಬಂಧಗಳ ಸ್ಥಾಯಿ ಸಮಿತಿ ಎದುರು ಹೇಳಿಕೆ ನೀಡಿದ ರೂಬಿಯೊ, ಇರಾನಿನ ಆಡಳಿತ ವ್ಯವಸ್ಥೆಯ ಆಂತರಿಕ ರಚನೆಯು ಖಾಮಿನೈ ಅವರ ನಂತರದ ಭವಿಷ್ಯದ ಬಗ್ಗೆ ಮುನ್ಸೂಚನೆಯನ್ನು ಅನಿಶ್ಚಿತಗೊಳಿಸುತ್ತದೆ ಎಂದರು.
ಅಬ್ರಹಾಂ ಲಿಂಕನ್ ವಿಮಾನವಾಹಕ ಯುದ್ದ ನೌಕೆ ನಿಯೋಜನೆ ಸೇರಿದಂತೆ ಮಧ್ಯಪ್ರಾಚ್ಯದಾದ್ಯಂತ ಅಮೆರಿಕಾದ ಮಿಲಿಟರಿ ವ್ಯವಸ್ಥೆಗಳನ್ನು ಬಲಪಡಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ರೂಬಿಯೊ ಸಮರ್ಥಿಸಿಕೊಂಡಿದ್ದು ಈ ಕ್ರಮವು ಈ ಪ್ರದೇಶದಲ್ಲಿ ನೆಲೆಸಿರುವ 30,000ಕ್ಕೂ ಹೆಚ್ಚು ಅಮೆರಿಕಾದ ಸೇವಾ ಸಿಬ್ಬಂದಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.





