ಹೂತಿಗಳ ಮೇಲೆ ಸೌದಿ ಪಡೆಗಳಿಂದ ಬೃಹತ್ ದಾಳಿ

Photo Credit : x
ಏಡನ್: ಯಮನ್ನಲ್ಲಿ ಹೂತಿ ಬಂಡುಕೋರರ ವಿರುದ್ಧ ಹೋರಾಡುತ್ತಿರುವ ಸೌದಿ ನೇತೃತ್ವದ ಮೈತ್ರಿಕೂಟವು, ಬಂಡುಕೋರರ ನಿಯಂತ್ರಣದಲ್ಲಿರುವ ಪ್ರದೇಶಗಳಾದ್ಯಂತ ಬೃಹತ್ ವಾಯುದಾಳಿ ನಡೆಸಿರುವುದಾಗಿ ಬುಧವಾರ ತಿಳಿಸಿದೆ. ಈ ದಾಳಿಯಲ್ಲಿ ಕನಿಷ್ಠ 17 ಜನರು ಮೃತಪಟ್ಟಿದ್ದಾರೆ ಎಂದು ಹೂತಿ ಬಂಡುಕೋರರು ಹೇಳಿದ್ದಾರೆ.
ರಾಜಧಾನಿ ಸನಾ ಮತ್ತು ಇತರ ಮೂರು ಪ್ರಾಂತಗಳ ಮೇಲೆ ನಡೆಸಲಾದ ಈ ದಾಳಿಯು, ಹೌತಿಗಳ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿ ಗೋದಾಮುಗಳು ಮತ್ತು ಡ್ರೋನ್ ಕಾರ್ಯಾಗಾರಗಳನ್ನು ಗುರಿಯಾಗಿಸಿಕೊಂಡಿತ್ತು ಎಂದು ಮೈತ್ರಿಕೂಟದ ವಕ್ತಾರರು ತಿಳಿಸಿದ್ದಾರೆ.
ಹೊದೈದಾದಲ್ಲಿನ ಸ್ಪಾಂಜ್ ಕಾರ್ಖಾನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 15 ಜನರು ಮೃತಪಟ್ಟಿದ್ದು, ಇತರ 15 ಜನರು ಗಾಯಗೊಂಡಿದ್ದಾರೆ. ಸಾಡಾ ನಗರದದಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸನಾದಲ್ಲಿ 9 ಜನರು ಗಾಯಗೊಂಡಿದ್ದಾರೆ ಎಂದು ಹೂತಿ ಆಡಳಿತದ ಆರೋಗ್ಯ ಸಚಿವಾಲಯದ ವಕ್ತಾರ ಅನೀಸ್ ಅಲ್-ಅಸ್ಬಾಹಿ ಹೇಳಿದ್ದಾರೆ.
ಈ ಮಧ್ಯೆ, ಬುಧವಾರ ಸೌದಿ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಹೂತಿಗಳು ಹಾರಿಸಿದ ಎರಡು ಕ್ರೂಸ್ ಕ್ಷಿಪಣಿಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ನಾಶಪಡಿಸಿವೆ ಎಂದು ವರದಿಯಾಗಿದೆ.






