ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್ನಿಂದ ಬೃಹತ್ ದಾಳಿ : ಬೊಫೋರ್ಟ್ ಕೋಟೆ ಬಳಿ ಪ್ರಬಲ ಸ್ಫೋಟ

Photo Credit :aljazeera.com
ಬೈರೂತ್, ಜು.31: ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದ ಕದನ ವಿರಾಮ ಒಪ್ಪಂದದ ಹೊರತಾಗಿಯೂ ದಕ್ಷಿಣ ಲೆಬನಾನ್ನಲ್ಲಿ ತನ್ನ ಆಕ್ರಮಣವನ್ನು ಮುಂದುವರಿಸಿರುವ ಇಸ್ರೇಲ್ ಪಡೆಗಳು, ಯುನೆಸ್ಕೋ ಪಟ್ಟಿಯಲ್ಲಿರುವ ಲೆಬನಾನ್ನ ಬೊಫೋರ್ಟ್ ಕೋಟೆಯ ಬಳಿ ಪ್ರಬಲ ಸ್ಫೋಟಗಳ ಸರಣಿಯನ್ನೇ ನಡೆಸಿವೆ.
ಲೆಬನಾನ್ನ ದಕ್ಷಿಣ ಭಾಗದ ವಿಶಾಲ ಪ್ರದೇಶಗಳ ಹಲವು ವಿಭಿನ್ನ ಸ್ಥಳಗಳ ಮೇಲೆ ಇಸ್ರೇಲ್ ಗುರುವಾರ ತಡರಾತ್ರಿ ಬೃಹತ್ ದಾಳಿ ನಡೆಸಿದೆ. ಬೊಫೋರ್ಟ್ ಕೋಟೆಯ ಸಮೀಪದ ಪ್ರದೇಶದಲ್ಲಿ ಇಸ್ರೇಲ್ ಪಡೆಗಳು ಮಧ್ಯರಾತ್ರಿ ವೇಳೆಗೆ ಅತ್ಯಂತ ಪ್ರಬಲವಾದ ಸ್ಫೋಟಗಳನ್ನು ನಡೆಸಿವೆ. ಈ ಭೀಕರ ಸ್ಫೋಟದ ತೀವ್ರತೆ ಮತ್ತು ಆಘಾತಕಾರಿ ತರಂಗಗಳಿಂದಾಗಿ ಕ್ಲಾಯಾ ನಗರದ ಹಲವಾರು ಮನೆಗಳ ಕಿಟಕಿಗಳಿಗೆ ಹಾನಿಯಾಗಿವೆ ಎಂದು ಲೆಬನಾನ್ನ ಅಧಿಕೃತ ನ್ಯಾಷನಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಬೊಫೋರ್ಟ್ ಪ್ರದೇಶದಲ್ಲಿದ್ದ ಸುರಂಗ ವ್ಯವಸ್ಥೆಯನ್ನು ಸೇನೆಯು ಸ್ಫೋಟಿಸಿದೆ. ಗಲಿಲೀ ಪ್ರದೇಶಕ್ಕೆ ನುಸುಳಲು ಹಿಜ್ಬುಲ್ಲಾ ರೂಪಿಸಿದ್ದ ಪ್ರಮುಖ ಯೋಜನೆಯ ಭಾಗವೇ ಈ ಸುರಂಗ ವ್ಯವಸ್ಥೆಯಾಗಿತ್ತು. ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾದ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿ ಈ ಸ್ಫೋಟ ನಡೆಸಲಾಗಿದ್ದು, ಇದಕ್ಕೆ ಸುಮಾರು 700 ಟನ್ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಇಸ್ರೇಲ್ ಕಾಟ್ಝ್ ತಿಳಿಸಿದ್ದಾರೆ.






