ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು: 3 ಮಂದಿಗೆ ಗಾಯ; ವ್ಯಾಪಕ ಹಾನಿ

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಆ.5: ಅಮೆರಿಕದ ಮಧ್ಯ ಕ್ಯಾಲಿಫೋರ್ನಿಯಾದಲ್ಲಿ ಶುಕ್ರವಾರದಿಂದ ಕ್ಷಿಪ್ರಗತಿಯಲ್ಲಿ ಹರಡುತ್ತಿರುವ ಕಾಡ್ಗಿಚ್ಚಿನಿಂದಾಗಿ ನೂರಕ್ಕೂ ಅಧಿಕ ಮನೆಗಳಿಗೆ ಅಪಾಯ ಎದುರಾಗಿದ್ದು ಲಾಸ್ ಪಡ್ರೆಸ್ ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಕ್ಯಾಲಿಫೋರ್ನಿಯಾ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ.
ಕರಾವಳಿಯ ಸಾಂತಾ ಬಾರ್ಬರಾ ಮತ್ತು ಸ್ಯಾನ್ಲೂಯಿಸ್ ಒಬಿಸ್ಪೋ ನಗರಗಳಲ್ಲಿ 260 ಚದರ ಕಿ.ಮೀ ಪ್ರದೇಶವನ್ನು ಕಾಡ್ಗಿಚ್ಚು ಸುಟ್ಟುಹಾಕಿದ್ದು ಈಗಲೂ ನಿಯಂತ್ರಣಕ್ಕೆ ಬಂದಿಲ್ಲ. ಈ ನಗರದ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರನೊಬ್ಬನಿಗೆ ಸುಟ್ಟ ಗಾಯಗಳಾಗಿವೆ. ಅಗ್ನಿಶಾಮಕದ ದಳದ ಇಬ್ಬರು ಸಿಬ್ಬಂದಿಗಳೂ ಗಾಯಗೊಂಡಿದ್ದಾರೆ. ಸಾಂತಾ ಮಾರಿಯಾ ನಗರದ ಪ್ರಮುಖ ಹೆದ್ದಾರಿಯನ್ನು ಮುಚ್ಚಲಾಗಿದೆ. 1000ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದು ಹೆಲಿಕಾಪ್ಟರ್ ಗಳನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
---------





