ಮಾರಿಷಸ್ ವಿಶೇಷ ಆರ್ಥಿಕ ವಲಯದ ಭದ್ರತೆಗೆ ಭಾರತ ಸಹಕಾರ: ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಾರ
►8 ಒಪ್ಪಂದಗಳಿಗೆ ಭಾರತ-ಮಾರಿಷಸ್ ಸಹಿ

ನರೇಂದ್ರ ಮೋದಿ | PC : PTI
ಪೋರ್ಟ್ ಲೂಯಿಸ್: ಭಾರತ ಮತ್ತು ಮಾರಿಷಸ್ ಬುಧವಾರ ತಮ್ಮ ಸಂಬಂಧವನ್ನು `ವರ್ಧಿತ ಕಾರ್ಯತಂತ್ರದ ಸಹಭಾಗಿತ್ವ'ಕ್ಕೆ ಏರಿಸಿವೆ ಮತ್ತು ಕಡಲ ಭದ್ರತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಎಂಟು ಒಪ್ಪಂದಗಳಿಗೆ ಸಹಿ ಹಾಕಿವೆ.
ಮಾರಿಷಸ್ ಪ್ರಧಾನಿ ನವೀನ್ಚಂದ್ರ ರಾಮಗೂಲಂ ಅವರೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ದಕ್ಷಿಣದ ಅಭಿವೃದ್ಧಿಗೆ ಮಹಾತ್ವಾಕಾಂಕ್ಷೆಯ ಪರಿಕಲ್ಪನೆಯನ್ನು ಅನಾವರಣಗೊಳಿಸಿದರು. ಗಡಿಯಾಚೆಗಿನ ವಹಿವಾಟುಗಳಿಗೆ ರಾಷ್ಟ್ರೀಯ ಕರೆನ್ಸಿಗಳ ಬಳಕೆಯನ್ನು ಉತ್ತೇಜಿಸಲು, ಕಡಲ ದತ್ತಾಂಶವನ್ನು ಹಂಚಿಕೊಳ್ಳಲು, ಹಣ ಅಕ್ರಮ ವರ್ಗಾವಣೆ ಸಮಸ್ಯೆಯನ್ನು ಎದುರಿಸಲು, ಎಂಎಸ್ಎಂಇ(ಸೂಕ್ಷ್ಮ, ಅತೀ ಸೂಕ್ಷ್ಮ ಮತ್ತು ಮಧ್ಯಮ ಉದ್ಯಮಗಳು) ಕ್ಷೇತ್ರದಲ್ಲಿ ಸಹಕಾರ ವರ್ಧಿಸಲು ಒಪ್ಪಂದ ಅವಕಾಶ ಮಾಡಿಕೊಡಲಿದೆ.
ಎರಡು ದಿನಗಳ ಮಾರಿಷಸ್ ಪ್ರವಾಸದ ಕಡೆಯ ದಿನದಂದು ಪ್ರಧಾನಿ ಮೋದಿ ಮಾರಿಷಸ್ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಭಾರತೀಯ ವಾಯುಪಡೆಯ ಆಕಾಶ್ ಗಂಗಾ ಸ್ಕೈಡೈವಿಂಗ್ ತಂಡದೊಂದಿಗೆ ಭಾರತದ ಸಶಸ್ತ್ರ ಪಡೆಗಳ ತಂಡವು ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿತ್ತು.
ಮಾರಿಷಸ್ ಪ್ರಧಾನಿ ರಾಮಗೂಲಂ ಅವರೊಂದಿಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ಮೋದಿ ಜಾಗತಿಕ ದಕ್ಷಿಣಕ್ಕಾಗಿ ಭಾರತದ ಹೊಸ ಪರಿಕಲ್ಪನೆಯನ್ನು ಘೋಷಿಸಿದರು ಮತ್ತು ಇದಕ್ಕೆ `ಮಹಾಸಾಗರ' (ಮ್ಯೂಚುವಲ್ ಆ್ಯಂಡ್ ಹೊಲಿಸ್ಟಿಕ್ ಅಡ್ವಾನ್ಸ್ಮೆಂಟ್ ಫಾರ್ ಸೆಕ್ಯುರಿಟಿ ಆ್ಯಂಡ್ ಗ್ರೋಥ್ ಎಕ್ರಾಸ್ ರೀಜನ್ಸ್) ಎಂದು ಹೆಸರಿಸಿದರು. ಮುಕ್ತ, ಸ್ವತಂತ್ರ, ಸುಭದ್ರ ಮತ್ತು ಸುರಕ್ಷಿತ ಹಿಂದೂ ಮಹಾಸಾಗರವು ಭಾರತ ಮತ್ತು ಮಾರಿಷಸ್ನ ಸಾಮಾನ್ಯ ಆದ್ಯತೆಯಾಗಿದೆ ಮತ್ತು ರಕ್ಷಣಾ ಸಹಕಾರ ಮತ್ತು ಕಡಲ ಭದ್ರತೆಯು ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವದ ಪ್ರಮುಖ ಭಾಗವಾಗಿದೆ ಎಂದು ತಾನು ಹಾಗೂ ಮಾರಿಷಸ್ ಪ್ರಧಾನಿ ಒಪ್ಪಿಕೊಂಡಿರುವುದಾಗಿ ಮೋದಿ ಹೇಳಿದರು. ಮಾರಿಷಸ್ನ ವಿಶೇಷ ಆರ್ಥಿಕ ವಲಯದ ಭದ್ರತೆಗಾಗಿ ಸಂಪೂರ್ಣ ಸಹಕಾರವನ್ನು ವಿಸ್ತರಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
►ಮಾರಿಷಸ್ಗೆ ಸಂಸತ್ ಭವನ ಕೊಡುಗೆ
ಮಾರಿಷಸ್ಗೆ ಹೊಸದಾಗಿ ಸಂಸತ್ ಭವನವನ್ನು ಭಾರತ ನಿರ್ಮಿಸಿ ಕೊಡಲಿದೆ. ಜತೆಗೆ ಪೊಲೀಸ್ ಅಕಾಡೆಮಿ ಮತ್ತು ರಾಷ್ಟ್ರೀಯ ಕಡಲು ಮಾಹಿತಿ ವಿನಿಮಯ ಕೇಂದ್ರವನ್ನು ಭಾರತ ಸ್ಥಾಪಿಸಲಿದೆ. ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಚಾಗೋಸ್ ದ್ವೀಪ ಸೇರಿದಂತೆ ಈ ಭಾಗದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜತೆಗೆ ಮಾರಿಷಸ್ನ ಸಾರ್ವಭೌಮತ್ವವನ್ನು ಭಾರತ ಸಂಪೂರ್ಣವಾಗಿ ಗೌರವಿಸುತ್ತದೆ' ಎಂದು ಮೋದಿ ಹೇಳಿದ್ದಾರೆ.