ಭಾರತದ ಮೇಲೆ ಶೇ20 ರಿಂದ 25ರಷ್ಟು ಸುಂಕ ಹೇರಿಕೆ : ಡೊನಾಲ್ಡ್ ಟ್ರಂಪ್ ಸುಳಿವು

ಡೊನಾಲ್ಡ್ ಟ್ರಂಪ್ | PTI
ಹೊಸದಿಲ್ಲಿ: ಭಾರತ ಅಮೆರಿಕದ ಮಿತ್ರರಾಷ್ಟ್ರ, ಆದರೆ ಕಳೆದ ಏಪ್ರಿಲ್ನಲ್ಲಿ ಘೋಷಿಸಿರುವ ಶೇಕಡ 26ರಷ್ಟು ಪ್ರತಿ ಸುಂಕಕ್ಕೆ ಬದಲಾಗಿ ಶೇಕಡ 20 ರಿಂದ ಶೇಕಡ 25ರಷ್ಟು ಸುಂಕ ವಿಧಿಸುವ ಸುಳಿವನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ.
ಆಗಸ್ಟ್ 1ರ ಗಡುವು ಸಮೀಪಿಸುತ್ತಿದ್ದಂತೆಯೇ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆ ಮುಂದುವರಿದಿದೆ. ಅಂತಿಮವಾಗಿ ವಿಧಿಸುವ ಸುಂಕದ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ಮೇಲೆ ಶೇಕಡ 20-25ರಷ್ಟು ಸುಂಕ ವಿಧಿಸಲಾಗುತ್ತಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ, "ನನಗೆ ಹಾಗನಿಸುತ್ತದೆ" ಎಂದು ಟ್ರಂಪ್ ಉತ್ತರಿಸಿದರು.
"ಭಾರತ ಒಳ್ಳೆಯ ಮಿತ್ರ; ಆದರೆ ಭಾರತ ಇತರ ಯಾವುದೇ ದೇಶಗಳಿಗಿಂತ ಅಧಿಕ ಸುಂಕವನ್ನು ಅಮೆರಿಕದ ಮೇಲೆ ವಿಧಿಸುತ್ತಿದೆ" ಎಂದು ಸ್ಕಾಟ್ಲೆಂಡ್ ಗೆ ಐದು ದಿನಗಳ ಭೇಟಿ ನೀಡಿ ವಾಪಸ್ಸಾಗುವ ವೇಳೆ ಏರ್ಪೋರ್ಸ್ ವನ್ ವಿಮಾನದಲ್ಲಿ ಟ್ರಂಪ್ ಪ್ರತಿಕ್ರಿಯಿಸಿದರು. ನೀವು ಹಾಗೆ ಮಾಡುವಂತಿಲ್ಲ" ಎಂದು ಸ್ಪಷ್ಟಪಡಿಸಿದರು.
ಸುಮಾರು ಶೇಕಡ 20-25ರಷ್ಟು ಸುಂಕದಲ್ಲಿ ಶೇಕಡ 10ರಷ್ಟು ಮೂಲ ಸುಂಕ ಸೇರಿದ್ದು, ಜವಳಿ ಉತ್ಪನ್ನಗಳಲ್ಲಿ ಭಾರತದ ಜತೆ ಪೈಪೋಟಿಯಲ್ಲಿರುವ ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ವಿಯೇಟ್ನಾಂ (20%), ಇಂಡೋನೇಷ್ಯಾ (19%) ದೇಶಗಳು ಭಾರತಕ್ಕಿಂತ ಕಡಿಮೆ ಸುಂಕ ಎದುರಿಸುತ್ತಿವೆ. ಯುರೋಪಿಯನ್ ಒಕ್ಕೂಟ ಮತ್ತು ಜಪಾನ್ (15%) ಮೇಲೆ ವಿಧಿಸಿದ ಸುಂಕ ಕೂಡಾ ಭಾರತಕ್ಕಿಂತ ಕಡಿಮೆ. ಚೀನಾದ ವಸ್ತುಗಳಿಗೆ ಪ್ರಸ್ತುತ ಶೇಕಡ 30ರಷ್ಟು ಕಸ್ಟಮ್ಸ್ ಸುಂಕ ವಿಧಿಸಲಾಗುತ್ತಿದೆ.







