ಮಕ್ಕಾ, ಮದೀನಾಗಳಲ್ಲಿ 81,000 ಯಾತ್ರಿಕರಿಗೆ ವೈದ್ಯಕೀಯ ಸೇವೆ

Photo: PTI
ರಿಯಾದ್: ಜೂನ್ 19ರಿಂದ ಒಟ್ಟು 80,973 ಯಾತ್ರಾರ್ಥಿಗಳು ಮಕ್ಕಾ ಮತ್ತು ಮದೀನಾಗಳಲ್ಲಿನ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಕೀಯ ಸೇವೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಸೌದಿ ಅರೇಬಿಯದ ಆರೋಗ್ಯ ಸಚಿವಾಲಯ ಹೇಳಿದೆ.
ವಿಶೇಷ ಆರೋಗ್ಯ ಸೇವೆಗಳಲ್ಲಿ 23 ತೆರೆದ ಹೃದಯದ ಶಸ್ತ್ರಚಿಕಿತ್ಸೆಗಳು, 464 ಡಯಾಲಿಸಿಸ್ ಸೆಷನ್ಸ್ಗಳು, 41 ಎಂಡೊಸ್ಕೊಪಿ ಚಿಕಿತ್ಸೆಗಳು ಸೇರಿವೆ. ಹಜ್ ಸಂದರ್ಭ ತಾಪಮಾನ ಹೆಚ್ಚಿರುವುದರಿಂದ ಯಾತ್ರಿಕರಿಗೆ ಶಾಖದ ಒತ್ತಡದ ಅಪಾಯ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯವನ್ನು ಉಲ್ಲೇಖಿಸಿ ಸೌದಿ ಪ್ರೆಸ್ ಏಜೆನ್ಸಿ ಸೋಮವಾರ ವರದಿ ಮಾಡಿದೆ.
ಅರಫಾತ್ನಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳು ಯಾತ್ರಿಕರಿಗೆ ಎಲ್ಲಾ ರೀತಿಯ ವೈದ್ಯಕೀಯ ರಕ್ಷಣೆ ಒದಗಿಸಲು ಸಜ್ಜಾಗಿದೆ. ಜಬಲುರ್ರಹ್ಮ ಆಸ್ಪತ್ರೆ, ಅರಫಾತ್ ಜನರಲ್ ಆಸ್ಪತ್ರೆ, ನಮ್ರಾ ಆಸ್ಪತ್ರೆ ಮತ್ತು ಈಸ್ಟ್ ಅರಫಾತ್ಆಸ್ಪತ್ರೆಗಳ ಜತೆಗೆ, ಸಂಚಾರಿ ಚಿಕಿತ್ಸಾಲಯ, 46 ಆರೋಗ್ಯ ಕೇಂದ್ರಗಳಲ್ಲಿ 1,700 ವೈದ್ಯಕೀಯ ಸಿಬ್ಬಂದಿಯನ್ನು ಅತ್ಯಾಧುನಿಕ ವೈದ್ಯಕೀಯ ಸಾಧನಗಳೊಂದಿಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನಾಲ್ಕು ಆಸ್ಪತ್ರೆಗಳಲ್ಲಿ 900ಕ್ಕೂ ಅಧಿಕ ಹಾಸಿಗೆಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಇಲಾಖೆ ಹೇಳಿದೆ. ಈ ಮಧ್ಯೆ, ಈ ಬಾರಿಯ ಹಜ್ ಸೀಸನ್ನಲ್ಲಿ ಸಾರಿಗೆ ಸೇವೆಗಳ ಸಮಗ್ರ ವ್ಯವಸ್ಥೆಗೆ ಅನುಕೂಲವಾಗುವಂತೆ ಸಂಚಾರಿ ಸೇವೆಗಳ ವಿಭಾಗದ ಮೂಲಕ ಯಾತ್ರಿಕರಿಗೆ 9,000 ಗಾಲಿಕುರ್ಚಿಗಳನ್ನು ಒದಗಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.