ಜಪಾನಿನ ಮುಂದಿನ ಪ್ರಧಾನಿಯಾಗಲು ಬೈಕರ್ - ʼಐರನ್ ಲೇಡಿʼ ಸನೆ ತಕೈಚಿ ಸಜ್ಜು

ಸನೆ ತಕೈಚಿ | Photo Credit : X \ @takaichi_sanae
ಟೋಕಿಯೊ: ಜಪಾನಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೋರ್ವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. 64ರ ಹರೆಯದ ಸನೆ ತಕೈಚಿ ಅವರು ಜಪಾನಿನ ಮುಂದಿನ ಪ್ರಧಾನಿಯಾಗಲು ಸಜ್ಜಾಗಿದ್ದಾರೆ.
ರಾಷ್ಟ್ರ ಮೊದಲು ಎಂಬ ನಿಲುವನ್ನು ಹೊಂದಿರುವ ತಕೈಚಿ ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದ ಮಾತುಕತೆ ಜಪಾನಿಗೆ ಹಾನಿಕಾರಕ ಅಥವಾ ಅನ್ಯಾಯದ್ದು ಎಂದು ಭಾವಿಸಿದರೆ ಆ ದೇಶವನ್ನು ಎದುರು ಹಾಕಿಕೊಳ್ಳಲೂ ಸಿದ್ಧರಿದ್ದಾರೆ. ಒಮ್ಮೆ ಕಾಲೇಜಿನ ಹೆವಿ ಮೆಟಲ್ ಬ್ಯಾಂಡ್ನಲ್ಲಿ ಡ್ರಮ್ ವಾದಕಿಯಾಗಿದ್ದು, ಗುಲಾಬಿ ವರ್ಣದ ಕೇಶರಾಶಿಯನ್ನು ಹೊಂದಿರುತ್ತಿದ್ದ ಮತ್ತು ಬೈಕ್ ರೇಸಿಂಗ್ನಲ್ಲಿ ತೊಡಗಿರುತ್ತಿದ್ದ ತಕೈಚಿ ರಾಜಕೀಯ ಪ್ರವೇಶಿಸಿದಾಗ ಬೈಕ್ಗಳಿಗೆ ಗುಡ್ಬಾಯ್ ಹೇಳಿದ್ದರು.
ಜಗತ್ತಿನಾದ್ಯಂತ ವಲಸೆ ವಿರೋಧಿ ಭಾವನೆ ಹೆಚ್ಚುವುದರೊಂದಿಗೆ ಇದು ಸಂಪ್ರದಾಯವಾದಿಗಳಿಗೆ ಕಾಲವಾಗಿದ್ದು ಜಪಾನ್ ಕೂಡ ಇದಕ್ಕೆ ಹೊರತಾಗಿಲ್ಲ. ದೇಶದ ಆಡಳಿತ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳಲಿರುವ ತಕೈಚಿ ಅವರ ವಲಸೆ ಮತ್ತು ಪೆಸಿಫಿಕ್ ಸಾಗರದಲ್ಲಿ ಚೀನಿ ಸೇನೆಯ ಜಮಾವಣೆ ಕುರಿತ ನಿಲುವು ಮತ್ತು ಜಪಾನ್ ಭವಿಷ್ಯದ ಯುದ್ಧಗಳಲ್ಲಿ ಭಾಗಿಯಾಗುವುದನ್ನು ನಿಷೇಧಿಸಿರುವ ದ್ವಿತೀಯ ಮಹಾಯುದ್ಧದ ನಂತರದ ಸಂವಿಧಾನದ ವಿಧಿಯ ಮರುಪರಿಶೀಲನೆಗೆ ಅವರ ಒತ್ತು ಇವೆಲ್ಲ ಮತದಾರರನ್ನು ಆಕರ್ಷಿಸಿವೆ.
ಇದು ತನ್ನ ವಲಸೆ ವಿರೋಧಿ ಸಂದೇಶದೊಂದಿಗೆ ಜನಪ್ರಿಯತೆಯನ್ನು ಗಳಿಸಿರುವ ರಾಷ್ಟ್ರೀಯವಾದಿ ಸ್ಯಾನಸಿಟೊ ಪಕ್ಷದತ್ತ ಒಲವು ಹೊಂದಿರುವ ಮತದಾರರನ್ನು ಮರಳಿ ಸೆಳೆಯುವ ಪ್ರಯತ್ನವಾಗಿದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ. ವಲಸೆ ಮತ್ತು ಅಪರಾಧ ಕುರಿತು ಅವರ ನಿಲುವು ಅವರ ರಾಜಕೀಯ ಅನನ್ಯತೆಯ ಕೇಂದ್ರ ಬಿಂದುವಾಗಿದೆ.
ತಕೈಚಿ ಶನಿವಾರ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ(ಎಲ್ಡಿಪಿ) ನಾಯಕತ್ವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ಗಾದಿಗೇರುವ ಮಾರ್ಗವನ್ನು ಸುಗಮಗೊಳಿಸಿಕೊಂಡಿದ್ದಾರೆ.
ತಕೈಚಿ ‘ಉಕ್ಕಿನ ಮಹಿಳೆ’ ಎಂದೇ ಖ್ಯಾತರಾಗಿದ್ದ ದಿವಂಗತ ಬ್ರಿಟನ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರನ್ನು ತನ್ನ ರಾಜಕೀಯ ನಾಯಕಿ ಎಂದು ಪರಿಗಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ‘ಭಾರತದ ಆತ್ಮೀಯ ಸ್ನೇಹಿತ’ ಎಂದು ಬಣ್ಣಿಸಿದ್ದ,ಹತ್ಯೆಗೀಡಾದ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅನುಯಾಯಿಯಾಗಿರುವ ತಕೈಚಿ ಎಲ್ಡಿಪಿಯ ಸಂಪ್ರದಾಯವಾದಿ ಸದಸ್ಯರ ಬಲವಾದ ಬೆಂಬಲವನ್ನು ಹೊಂದಿದ್ದಾರೆ.
ತಕೈಚಿ ಅವರ ರಾಜಕೀಯ ಏಳಿಗೆಯು ಅಬೆ ಜೊತೆ ಅವರ ಸಂಪರ್ಕದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದೆ. ಅಬೆ ತನ್ನ ಅಧಿಕಾರಾವಧಿಯಲ್ಲಿ ಅವರನ್ನು ಪಕ್ಷದ ಪ್ರಮುಖ ಹುದ್ದೆಗಳಿಗೆ ನೇಮಕಗೊಳಿಸಿದ್ದರು.
ಆರ್ಥಿಕ ರಂಗದಲ್ಲಿ ತಕೈಚಿ ವಿತ್ತೀಯ ಸಡಿಲಿಕೆ ಮತ್ತು ಹೆಚ್ಚಿನ ವಿತ್ತೀಯ ವೆಚ್ಚವನ್ನು ಬೆಂಬಲಿಸುತ್ತಾರೆ. ಇದು ಅವರ ದಿವಂಗತ ಮಾರ್ಗದರ್ಶಕ ಅಬೆಯವರ ‘ಅಬೆನಾಮಿಕ್ಸ್’ ನೀತಿಗಳನ್ನು ಪ್ರತಿಧ್ವನಿಸುತ್ತದೆ.
ಶಿಕ್ಷೆಗೊಳಗಾಗಿದ್ದ ಯುದ್ಧಾಪರಾಧಿಗಳು ಸೇರಿದಂತೆ ಜಪಾನಿನ ಯುದ್ಧದಲ್ಲಿ ಮಡಿದವರ ಗೌರವಾರ್ಥ ಯಸುಕಿನಿ ಮಂದಿರಕ್ಕೆ ನಿಯಮಿತವಾಗಿ ಭೇಟಿ ನೀಡುವ ತಕೈಚಿಯವರ ಕ್ರಮಗಳು ನೆರೆಯ ದೇಶಗಳ ಗಮನವನ್ನು ಸೆಳೆದಿವೆ.
ಹಣದುಬ್ಬರ ಮತ್ತು ಇತ್ತೀಚಿನ ಹಗರಣಗಳ ಕುರಿತು ಮತದಾರರ ಅತೃಪ್ತಿ ಸೇರಿದಂತೆ ಎಲ್ಡಿಪಿ ಎದುರಿಸುತ್ತಿರುವ ಹಲವಾರು ಸವಾಲುಗಳ ನಡುವೆಯೇ ನಾಯಕತ್ವವು ತಕೈಚಿಯವರಿಗೆ ಒಲಿದಿದೆ.
ತಕೈಚಿಯವರ ಕಠಿಣ ನಿಲುವುಗಳು ಆರ್ಥಿಕ ಭದ್ರತೆ,ಅಪರಾಧ ಮತ್ತು ವಿದೇಶಿ ಪ್ರಭಾವ ಕುರಿತು ಕಳವಳಗಳನ್ನು ಪರಿಹರಿಸುವ ಉದ್ದೇಶವನ್ನು ಹೊಂದಿದ್ದು,ಇದು ಕಟ್ಟಾ ಸಂಪ್ರದಾಯವಾದಿ ನಾಯಕಿಯಾಗಿ ಅವರ ವ್ಯಕ್ತಿತ್ವವನ್ನು ಬಲಗೊಳಿಸಿದೆ.
ತಕೈಚಿಯವರ ಆಯ್ಕೆ ಲಿಂಗ ಪ್ರಾತಿನಿಧ್ಯದಲ್ಲಿ ಒಂದು ಮೈಲಿಗಲ್ಲಾಗಿದ್ದರೂ, ಅವರನ್ನು ಸ್ತ್ರೀವಾದಿ ಅಭ್ಯರ್ಥಿಯನ್ನಾಗಿ ನೋಡಲಾಗಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.







