ಇರಾನ್ ಕಾರ್ಯಾಚರಣೆಯ ಬಗ್ಗೆ ಟ್ರಂಪ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಂತೆ ಚಪ್ಪಾಳೆ ತಟ್ಟಿದ ಮೆಸ್ಸಿ; ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ

ಡೊನಾಲ್ಡ್ ಟ್ರಂಪ್ , ಲಿಯೋನೆಲ್ ಮೆಸ್ಸಿ | Photo Credit : X
ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ನಡೆಸುತ್ತಿರುವ ಸೈನಿಕ ದಾಳಿಗಳ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶ್ಲಾಘಿಸಿದ ಹಿನ್ನೆಲೆಯಲ್ಲಿ ಅರ್ಜೆಂಟೀನಾದ ಫುಟ್ಬಾಲ್ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ.
ಮೇಜರ್ ಲೀಗ್ ಸಾಕರ್ (MLS) ಪ್ರಶಸ್ತಿಯನ್ನು ಗೆದ್ದ ಹಿನ್ನೆಲೆಯಲ್ಲಿ ಮೆಸ್ಸಿ ನಾಯಕತ್ವದ ಇಂಟರ್ ಮಿಯಾಮಿ ತಂಡವನ್ನು ಶ್ವೇತಭವನದಲ್ಲಿ ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮೆಸ್ಸಿ ಹಾಗೂ ತಂಡದ ಆಟಗಾರರು ಟ್ರಂಪ್ ಭೇಟಿಯಾದರು. ಇದೇ ವೇಳೆ ಟ್ರಂಪ್ ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಗಳ ಕುರಿತು ಮಾತನಾಡಿದರು.
ವಾಷಿಂಗ್ಟನ್ ಡಿಸಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಟ್ರಂಪ್ ಮೆಸ್ಸಿಯನ್ನು ಪ್ರಶಂಸಿಸಿ,
‘ಯಾವ ಅಮೆರಿಕ ಅಧ್ಯಕ್ಷನಿಗೂ ಇದುವರೆಗೆ ಹೇಳುವ ಅವಕಾಶ ಸಿಗದ ಮಾತನ್ನು ಹೇಳಲು ನನಗೆ ಸವಲತ್ತು ಸಿಕ್ಕಿದೆ—ಶ್ವೇತಭವನಕ್ಕೆ ಸ್ವಾಗತ, ಲಿಯೋನೆಲ್ ಮೆಸ್ಸಿ’ ಎಂದು ಹೇಳಿದರು.
ಇದೇ ವೇಳೆ ಮೆಸ್ಸಿಯ ಸಾಧನೆಯನ್ನು ಉಲ್ಲೇಖಿಸಿದ ಟ್ರಂಪ್,‘ಲಿಯೋ, ನೀವು ಇಲ್ಲಿ ಬಂದಿದ್ದೀರಿ ಮತ್ತು ಗೆದ್ದಿದ್ದೀರಿ. ಅದು ಸಾಧಿಸಲು ತುಂಬಾ ಕಷ್ಟಕರವಾದುದು. ನಿಮ್ಮ ಮೇಲೆ ಅಪಾರ ಒತ್ತಡವಿತ್ತು, ಏಕೆಂದರೆ ಎಲ್ಲರೂ ನಿಮ್ಮಿಂದ ಗೆಲುವನ್ನೇ ನಿರೀಕ್ಷಿಸಿದ್ದರು’ ಎಂದು ಹೇಳಿದರು.
ಮೆಸ್ಸಿ 2023ರ ಮಧ್ಯಭಾಗದಲ್ಲಿ ಇಂಟರ್ ಮಿಯಾಮಿ ತಂಡವನ್ನು ಸೇರಿಕೊಂಡಿದ್ದರು. ಡಿಸೆಂಬರ್ ನಲ್ಲಿ ನಡೆದ ಫೈನಲ್ ನಲ್ಲಿ ಮಿಯಾಮಿ ತಂಡವು ವ್ಯಾಂಕೂವರ್ ವೈಟ್ಕ್ಯಾಪ್ಸ್ ತಂಡವನ್ನು ಸೋಲಿಸಿ MLS ಪ್ರಶಸ್ತಿ ಗೆದ್ದಿತ್ತು. ಮೆಸ್ಸಿಯನ್ನು ಸತತ ಎರಡನೇ ಸೀಸನ್ ಗೆ ಲೀಗ್ ನ ಅತ್ಯುತ್ತಮ ಆಟಗಾರ ಎಂದು ಘೋಷಿಸಲಾಗಿದೆ.
ಕಾರ್ಯಕ್ರಮದ ಆರಂಭದಲ್ಲೇ ಟ್ರಂಪ್ ಮಧ್ಯಪ್ರಾಚ್ಯದ ಪರಿಸ್ಥಿತಿ ಕುರಿತು ಮಾತನಾಡಿ, ಅಮೆರಿಕ ಸೈನ್ಯ ಮತ್ತು ಇಸ್ರೇಲ್ ಜೊತೆಗಿನ ಕಾರ್ಯಾಚರಣೆಗಳನ್ನು ಹೆಮ್ಮೆಯಿಂದ ಉಲ್ಲೇಖಿಸಿದರು.
‘ಯುನೈಟೆಡ್ ಸ್ಟೇಟ್ಸ್ ಮಿಲಿಟರಿ ನಮ್ಮ ಅದ್ಭುತ ಇಸ್ರೇಲಿ ಪಾಲುದಾರರೊಂದಿಗೆ ಶತ್ರುವನ್ನು ಸಂಪೂರ್ಣವಾಗಿ ನಾಶಮಾಡುವ ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ. ನಿಗದಿತ ಸಮಯಕ್ಕಿಂತ ಮುಂಚೆಯೇ ಮತ್ತು ಜನರು ಹಿಂದೆಂದೂ ನೋಡಿರದ ಮಟ್ಟದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ’ ಎಂದು ಟ್ರಂಪ್ ಹೇಳಿದರು.
ಟ್ರಂಪ್ ಈ ಮಾತುಗಳನ್ನು ಹೇಳುತ್ತಿದ್ದಾಗ ಸಭಾಂಗಣದಲ್ಲಿ ಇದ್ದ ಮೆಸ್ಸಿ ಹಾಗೂ ಇಂಟರ್ ಮಿಯಾಮಿ ಆಟಗಾರರು ಚಪ್ಪಾಳೆ ತಟ್ಟಿದರು. ಈ ದೃಶ್ಯಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮೆಸ್ಸಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ.
ಇರಾನ್ ಮೇಲಿನ ದಾಳಿಗಳಿಗೆ ಪ್ರತಿಯಾಗಿ ಟೆಹ್ರಾನ್ ಇಸ್ರೇಲ್ ಹಾಗೂ ಮಧ್ಯಪ್ರಾಚ್ಯದ ಹಲವು ಅಮೆರಿಕದ ಸೈನಿಕ ನೆಲೆಗಳ ಕಡೆಗೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ.
ಈ ನಡುವೆ ಮೆಸ್ಸಿಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೆಸ್ಸಿ, ಗಾಝಾದಲ್ಲಿ ಮೆಸ್ಸಿ ಹೆಸರಿನ #10 ಜೆರ್ಸಿ ಧರಿಸಿದ್ದ ಮಗುವನ್ನು ಇಸ್ರೇಲಿನ ಸೈನ್ಯ ಕೊಂದಿತು. ಗಾಝಾದಲ್ಲಿ ತನ್ನ ಹೆಸರಿನ ಜೆರ್ಸಿ ಧರಿಸಿದ ಮಕ್ಕಳು ಕೊಲ್ಲಲ್ಪಟ್ಟಾಗ ಅವರು ಮೌನವಾಗಿದ್ದರು. ಈಗ ಅವರು ಇರಾನ್ನಲ್ಲಿ ಮಕ್ಕಳನ್ನು ಕೊಂದ ದಾಳಿಯ ಸಂಚುಕೋರನನ್ನು ಭೇಟಿಯಾಗುತ್ತಾರೆ ಎಂದು ಫಿಲಸ್ತೀನಿ ಎಂಬ ಇನ್ಸ್ಟಾಗ್ರಾಂ ಖಾತೆ ತನ್ನ ಆಕ್ರೋಶ ಹೊರಹಾಕಿದೆ.
ಈ ಪೋಸ್ಟ್ ಜೊತೆ ಕಾಲು ಕಳೆದುಕೊಂಡ ಬಾಲಕನೋರ್ವನಿಗೆ ಆತನಷ್ಟೇ ಸಣ್ಣ ವಯಸ್ಸಿನ ಬಾಲಕನೋರ್ವ ಪಿವಿಸಿ ಪೈಪ್ ನಿಂದ ಕೃತಕ ಕಾಲು ಮಾಡುವ ಮಾರ್ಮಿಕನ ವೀಡಿಯೋ ಕೂಡ ಟ್ಯಾಗ್ ಮಾಡಿದೆ. ವಾಕಿಂಗ್ ಸ್ಟಿಕ್ ಬಳಸಿ ನಡೆಯಲು ಕಷ್ಟಪಡುವ ಬಾಲಕ ದೃಶ್ಯಗಳು ಭಾವುಕವಾಗಿಸುತ್ತದೆ.
ಫೆಲಸ್ತೀನ್–ಅಮೆರಿಕನ್ ಲೇಖಕ ಅಲಿ ಅಬುನಿಮಾ,‘ಸ್ವಾರ್ಥಿ ಜನರು’ ಎಂದು ಪ್ರತಿಕ್ರಿಯಿಸಿದ್ದಾರೆ.
ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ‘ಹಲಾಲ್ ಟ್ರಿಬ್ಯೂನ್’ ಸಂಸ್ಥಾಪಕರು,‘ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧದ ಯುದ್ಧ ಯೋಜನೆ ಬಗ್ಗೆ ಮಾತನಾಡುವಾಗ ಲಿಯೋನೆಲ್ ಮೆಸ್ಸಿ ಚಪ್ಪಾಳೆ ತಟ್ಟುತ್ತಾರೆ. ಮೆಸ್ಸಿ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ?’ ಎಂದು ಪ್ರಶ್ನಿಸಿದ್ದಾರೆ.
ಸ್ಪ್ಯಾನಿಷ್ ಪತ್ರಕರ್ತೆ ಲೇಲಾ ಹಮೆದ್ ಈ ಘಟನೆಯನ್ನು ‘ವಿಲಕ್ಷಣ’ ಎಂದು ಟೀಕಿಸಿ,‘ಡೊನಾಲ್ಡ್ ಟ್ರಂಪ್ ಇಡೀ ಇಂಟರ್ ಮಿಯಾಮಿ ತಂಡದ ಮುಂದೆ ಇರಾನ್ ಮೇಲೆ ಮತ್ತಷ್ಟು ಬಾಂಬ್ ದಾಳಿಗಳನ್ನು ಘೋಷಿಸುತ್ತಿದ್ದಾರೆ’ ಎಂದು ಬರೆದಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಇರಾನಿನಲ್ಲಿ ನೂರಾರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅವರು ಗಮನಸೆಳೆದಿದ್ದಾರೆ. ಆಗ್ನೇಯ ಇರಾನ್ ನ ಮಿನಾಬ್ ನಗರದಲ್ಲಿ ನಡೆದ ಘಟನೆಯಲ್ಲಿ ಪ್ರಾಥಮಿಕ ಶಾಲೆಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 165 ಹುಡುಗಿಯರು ಮೃತಪಟ್ಟಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.‘ಇಂತಹ ಕ್ಷಣಗಳಲ್ಲಿ ನೀವು ನಿಮ್ಮ ಪ್ರಭಾವ ಮತ್ತು ಶಕ್ತಿಯನ್ನು ಬಳಸಲು ಸಾಧ್ಯವಾಗದಿದ್ದರೆ ಇಷ್ಟೊಂದು ಪ್ರಭಾವ ಮತ್ತು ಶಕ್ತಿಯನ್ನು ಹೊಂದಿರುವುದರ ಅರ್ಥವೇನು?’ ಎಂದು ಅವರು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮದ ವೇಳೆ ಮೆಸ್ಸಿ ಟ್ರಂಪ್ ಅವರಿಗೆ ಸಹಿ ಮಾಡಿದ ಇಂಟರ್ ಮಿಯಾಮಿ ಫುಟ್ಬಾಲ್ ಅನ್ನು ಉಡುಗೊರೆಯಾಗಿ ನೀಡಿದರು. ಟ್ರಂಪ್ ತಮ್ಮ ಪುತ್ರ ಬ್ಯಾರನ್ ಮೆಸ್ಸಿಯ ದೊಡ್ಡ ಅಭಿಮಾನಿ ಎಂದು ಹೇಳಿ,‘ನನ್ನ ಮಗ ಕೇಳಿದ – “ಅಪ್ಪಾ, ಇಂದು ಯಾರು ಬರುತ್ತಾರೆ ಗೊತ್ತಾ? ಮೆಸ್ಸಿ!” ಅವನು ನಿಮ್ಮ ಅಪಾರ ಅಭಿಮಾನಿ’ ಎಂದು ಹೇಳಿದರು.
ಟ್ರಂಪ್ ಇದೇ ವೇಳೆ ಕ್ರಿಸ್ಟಿಯಾನೊ ರೊನಾಲ್ಡೊ ಕುರಿತು ಮಾತನಾಡಿ,‘ಕ್ರಿಸ್ಟಿಯಾನೊ ಅದ್ಭುತ ಆಟಗಾರ. ನೀವು ಕೂಡ ಅದ್ಭುತರು’ ಎಂದು ಮೆಸ್ಸಿಯನ್ನು ಪ್ರಶಂಸಿಸಿದರು. ಫುಟ್ಬಾಲ್ ಇತಿಹಾಸವನ್ನು ಉಲ್ಲೇಖಿಸಿದ ಟ್ರಂಪ್,‘ನೀವು ಪೀಲೆಯಿಗಿಂತಲೂ ಉತ್ತಮರಾಗಿರಬಹುದು’ ಎಂದು ಮೆಸ್ಸಿಗೆ ಹೇಳಿದರು.
ಇಂಟರ್ ಮಿಯಾಮಿ ಸಹ–ಮಾಲೀಕ ಜಾರ್ಜ್ ಮಾಸ್ ಹಾಗೂ ತಂಡದ ತರಬೇತುದಾರ ಜೇವಿಯರ್ ಮಸ್ಚೆರಾನೊ ಅವರು ಅಮೆರಿಕ ಅಧ್ಯಕ್ಷರಿಗೆ ತಂಡದ ಜೆರ್ಸಿ ಮತ್ತು ಗಡಿಯಾರವನ್ನು ನೀಡಿದರು. ಟ್ರಂಪ್ ಅವರ ಆಡಳಿತಾವಧಿಯಲ್ಲಿ ಶ್ವೇತಭವನಕ್ಕೆ ಆಹ್ವಾನಿಸಲ್ಪಟ್ಟ ಮೊದಲ MLS ತಂಡವೆಂಬ ಹೆಗ್ಗಳಿಕೆಯನ್ನು ಇಂಟರ್ ಮಿಯಾಮಿ ಪಡೆದುಕೊಂಡಿದೆ.
Lionel Messi CLAPS when President Trump talks about his plan to defeat Iran 🇮🇷
— Halal Nation 𓃠 (@HalalNation_) March 5, 2026
Messi fans? pic.twitter.com/FtYmEAP2sa







