ಮೆಕ್ಸಿಕೊ ಶಾಲೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ
ಶಾಲಾ ಅವಧಿಯುದ್ದಕ್ಕೂ ನಿರ್ಬಂಧ; ತುರ್ತು ಸಂದರ್ಭಗಳಲ್ಲಿ ಮಾತ್ರ ಬಳಕೆಗೆ ಅವಕಾಶ

ಸಾಂದರ್ಭಿಕ ಚಿತ್ರ
ಮೆಕ್ಸಿಕೊ: ಮಕ್ಕಳಲ್ಲಿ ಮೊಬೈಲ್ ವೀಕ್ಷಣೆಯ ಸಮಯವನ್ನು ಕಡಿಮೆ ಮಾಡುವುದು ಹಾಗೂ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ತಡೆಯುವ ಉದ್ದೇಶದಿಂದ ಮೆಕ್ಸಿಕೊ ಸರಕಾರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಮೊಬೈಲ್ ಫೋನ್ ಸೇರಿದಂತೆ ವಿದ್ಯುನ್ಮಾನ ಸಾಧನಗಳ ಬಳಕೆಯನ್ನು ನಿಷೇಧಿಸಿದೆ. ಅಧ್ಯಕ್ಷೆ ಕ್ಲಾಡಿಯಾ ಶೈನ್ಬಾಮ್ ನೇತೃತ್ವದ ಸರಕಾರ ಜಾರಿಗೆ ತಂದಿರುವ ಈ ನಿಯಮ ನವೆಂಬರ್ 3ರಿಂದ ಅನ್ವಯವಾಗಲಿದೆ.
ಹೊಸ ನಿಯಮದ ಪ್ರಕಾರ, ಶಾಲಾ ದಿನಗಳಲ್ಲಿ ಇಡೀ ಶಾಲಾ ಅವಧಿಯುದ್ದಕ್ಕೂ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಸುವಂತಿಲ್ಲ. ತರಗತಿಗಳಲ್ಲಿ ಮಾತ್ರವಲ್ಲದೆ, ವಿರಾಮದ ವೇಳೆಯಲ್ಲಿಯೂ ಈ ನಿರ್ಬಂಧ ಅನ್ವಯವಾಗಲಿದೆ. ಆದರೆ, ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ, ವೈಯಕ್ತಿಕ ತುರ್ತು ಸಂದರ್ಭಗಳಲ್ಲಿ ಹಾಗೂ ಅಂಗವೈಕಲ್ಯ ಮತ್ತು ಆರೋಗ್ಯ ಸಂಬಂಧಿತ ಅಗತ್ಯಗಳಿಗಾಗಿ ಮೊಬೈಲ್ ಸಾಧನಗಳನ್ನು ಬಳಸಲು ಅವಕಾಶವಿದೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಮತ್ತು ಅಲ್ಲಿಂದ ಮನೆಗೆ ಮರಳುವಾಗ ಮೊಬೈಲ್ ಫೋನ್ ಗಳನ್ನು ಕೊಂಡೊಯ್ಯಬಹುದು. ಆದರೆ, ಶಾಲಾ ಆವರಣದಲ್ಲಿರುವಾಗ ಶಾಲಾ ಅವಧಿಯಲ್ಲಿ ಅವುಗಳನ್ನು ಬಳಸುವಂತಿಲ್ಲ.
ಮಕ್ಕಳ ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸುವ ಸರಕಾರದ ವ್ಯಾಪಕ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಿಕ್ಷಣ ಪ್ರಾಧಿಕಾರಗಳು ಮತ್ತು ತಜ್ಞರೂ ಈ ನಿರ್ಬಂಧವನ್ನು ಬೆಂಬಲಿಸಿದ್ದಾರೆ. ಡಿಜಿಟಲ್ ವೇದಿಕೆಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಯುವಜನರಲ್ಲಿ ಏಕಾಗ್ರತೆಯ ಕೊರತೆ, ಆತಂಕ ಮತ್ತು ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು ಎಂಬುದು ಅವರ ಅಭಿಪ್ರಾಯ.
ಆದರೆ, ಸರಕಾರದ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳ ಪೋಷಕರಿಂದ ವಿರೋಧ ವ್ಯಕ್ತವಾಗಿದೆ. ಮಕ್ಕಳ ಡಿಜಿಟಲ್ ಸ್ವಾಸ್ಥ್ಯದ ಬಗ್ಗೆ ಸರಕಾರ ಕಾಳಜಿ ವಹಿಸುತ್ತಿದ್ದರೆ, ಪೋಷಕರು ತಮ್ಮ ಮಕ್ಕಳ ದೈಹಿಕ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ. ವಿಶೇಷವಾಗಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಮೊಬೈಲ್ ಬಳಕೆಯ ಮೇಲಿನ ನಿರ್ಬಂಧ ಪೋಷಕರ ಆತಂಕವನ್ನು ಹೆಚ್ಚಿಸಿದೆ.
ಇಂತಹ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಗಳು ಮಕ್ಕಳ ಗಮನ ಬೇರೆಡೆ ಸೆಳೆಯುವ ಸಾಧನಗಳಷ್ಟೇ ಅಲ್ಲ. ಮಕ್ಕಳು ಸುರಕ್ಷಿತವಾಗಿ ಶಾಲೆ ತಲುಪಿದ್ದಾರೆಯೇ ಅಥವಾ ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಪೋಷಕರಿಗೆ ನೆರವಾಗುವ ಪ್ರಮುಖ ಸಂಪರ್ಕ ಸಾಧನಗಳಾಗಿವೆ.
►ಪೋಷಕರ ಆತಂಕಕ್ಕೆ ಕಾರಣವೇನು?
ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದ ಹಿಂಸಾಚಾರ ಪದೇ ಪದೇ ನಡೆಯುತ್ತಿರುವ ಸಿನಲೋವಾ ರಾಜ್ಯದಲ್ಲಿ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಮಕ್ಕಳ ಡಿಜಿಟಲ್ ಸಂವಹನಕ್ಕೆ ನಿರ್ಬಂಧ ವಿಧಿಸಿರುವ ನಿಯಮವನ್ನು ಒಪ್ಪಿಕೊಳ್ಳಲು ಹಲವು ಕುಟುಂಬಗಳು ಕಷ್ಟಪಡುತ್ತಿವೆ ಎಂದು ಸಿನಲೋವಾದ ನ್ಯಾಷನಲ್ ಯೂನಿಯನ್ ಆಫ್ ಪೇರೆಂಟ್ಸ್ ಸಂಘಟನೆಯ ರಾಜ್ಯ ಪ್ರತಿನಿಧಿ ಫ್ರಾನ್ಸಿಸ್ಕೊ ಓರ್ಟಿಝ್ ಹೇಳಿದ್ದಾರೆ.
‘ಮಕ್ಕಳಿಗೆ ಡಿಜಿಟಲ್ ಸಂವಹನದ ಅವಕಾಶವಿಲ್ಲದಿರುವುದನ್ನು ಪೋಷಕರು ಒಪ್ಪಿಕೊಳ್ಳುತ್ತಾರೆ ಎಂದು ನನಗನ್ನಿಸುವುದಿಲ್ಲ. ಅದರಲ್ಲೂ ಮಕ್ಕಳು ಶಾಲೆಯಲ್ಲಿ ಕಳೆಯುವುದಕ್ಕಿಂತ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರವನ್ನು ಒಪ್ಪಿಕೊಳ್ಳುವುದು ಕಷ್ಟ’ ಎಂದು ಅವರು ತಿಳಿಸಿದ್ದಾರೆ.
ಸರಕಾರ ಪೋಷಕರ ಕಳವಳಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿರುವ ಅವರು, ‘ಈ ನಿಯಮಗಳಿಗೆ ಅನುಮೋದನೆ ನೀಡಿರುವುದು ಪೋಷಕರ ಹಕ್ಕು ಮತ್ತು ಅಧಿಕಾರಕ್ಕೆ ವಿರುದ್ಧವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರ ಈ ಆತಂಕ ಕೇವಲ ಸಿನಲೋವಾ ರಾಜ್ಯಕ್ಕೆ ಸೀಮಿತವಾಗಿಲ್ಲ. ಉತ್ತರ ಮೆಕ್ಸಿಕೊದ ತಮೌಲಿಪಾಸ್ ರಾಜ್ಯದ ರೆನೋಸಾ ನಗರದ ನಿವಾಸಿ ಬೆನಿಂಗೊ ಗೋಮೆಝ್ ಕೂಡ ಇದೇ ರೀತಿಯ ಕಳವಳ ವ್ಯಕ್ತಪಡಿಸಿದ್ದಾರೆ.
‘ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆಯನ್ನು ಏಕೆ ಕಡಿಮೆ ಮಾಡಬೇಕು ಎಂದು ಶಿಕ್ಷಣ ಪ್ರಾಧಿಕಾರಗಳು ಬಯಸುತ್ತಿವೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ತುರ್ತು ಪರಿಸ್ಥಿತಿಯಲ್ಲಿ ಮಕ್ಕಳು ತಮ್ಮ ಮೊಬೈಲ್ ಸಾಧನಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ’ ಎಂದು ಅವರು ಹೇಳಿದ್ದಾರೆ.
ಮೆಕ್ಸಿಕೊದಲ್ಲಿ ಮಕ್ಕಳ ಸುರಕ್ಷತೆಯ ಕುರಿತ ಆತಂಕಕ್ಕೆ ಅಂಕಿ-ಅಂಶಗಳೂ ಪುಷ್ಟಿ ನೀಡಿವೆ. ಸಿವಿಲ್ ಸೊಸೈಟಿ ಕೊಅಲಿಷನ್ ನೆಟ್ವರ್ಕ್ ಫಾರ್ ಚಿಲ್ಡ್ರನ್ಸ್ ರೈಟ್ಸ್ ಇನ್ ಮೆಕ್ಸಿಕೊ (REDIM) ಸಂಘಟನೆಯ ಪ್ರಕಾರ, ಈ ವರ್ಷದ ಮೊದಲ ಆರು ತಿಂಗಳಲ್ಲಿ ಶೂನ್ಯದಿಂದ 17 ವರ್ಷದೊಳಗಿನ ಪ್ರತಿ 10 ಮೆಕ್ಸಿಕನ್ ಮಕ್ಕಳಲ್ಲಿ ಒಬ್ಬರು ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದ ಘಟನೆಗಳ ಸಂತ್ರಸ್ತರಾಗಿದ್ದಾರೆ.
►ಬಸ್ ಮೇಲಿನ ಗುಂಡಿನ ದಾಳಿಯಿಂದ ಹೆಚ್ಚಿದ ಆತಂಕ
ಅಕ್ಟೋಬರ್ 22ರಂದು ಸಿನಲೋವಾ ರಾಜ್ಯದ ಎಸ್ಕ್ವಿನಾಪಾ ಪ್ರದೇಶದಲ್ಲಿ ಒಂದು ಡಜನ್ಗೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಮೋಟಾರ್ಸೈಕಲ್ ನಲ್ಲಿ ಬಂದ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಮಾವು ಮತ್ತು ಸೀಗಡಿ ಉತ್ಪಾದನೆಯನ್ನೇ ಪ್ರಮುಖ ಆರ್ಥಿಕ ಚಟುವಟಿಕೆಯಾಗಿ ಅವಲಂಬಿಸಿರುವ ಈ ಸಣ್ಣ ಪಟ್ಟಣದ ಮೂಲಕ ಬಸ್ ನಿಯಮಿತವಾಗಿ ಸಂಚರಿಸುತ್ತಿತ್ತು.
ಗುಂಡಿನ ದಾಳಿಯಿಂದ ಬಸ್ನ ಗಾಜುಗಳು ಒಡೆದು, ಅವುಗಳ ಚೂರುಗಳು ತಗುಲಿ ಚಾಲಕ ಗಾಯಗೊಂಡಿದ್ದರು. ಆದರೆ, ಬಸ್ನಲ್ಲಿದ್ದ ವಿದ್ಯಾರ್ಥಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದರು.
ಈ ಘಟನೆಯು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿರುವ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ ವಿಧಿಸಿರುವ ಅಧ್ಯಕ್ಷೆ ಕ್ಲಾಡಿಯಾ ಶೈನ್ಬಾಮ್ ಸರಕಾರದ ನಿರ್ಧಾರ ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸೌಜನ್ಯ: India Today






