ಮೆಕ್ಸಿಕೊದಿಂದಲೂ ಭಾರತದ ಮೇಲೆ ಶೇ 50ರಷ್ಟು ಸುಂಕ

Photo Credit : freepik.com
2026 ಜನವರಿ 1ರಿಂದ ಅನ್ವಯವಾಗುವಂತೆ ಭಾರತದಿಂದ ಆಮದುಗಳ ಮೇಲೆ ಮೆಕ್ಸಿಕೊ ಶೇ 50ರಷ್ಟು ಸುಂಕ ವಿಧಿಸಿದೆ. ಇದು ಭಾರತದ ಮುಂದಿನ ವರ್ಷದ ರಫ್ತುಗಳ ಮೇಲೆ ಪರಿಣಾಮ ಬೀರಲಿದೆ.
ಭಾರತೀಯ ಆಮದುಗಳ ಮೇಲೆ ಅಮರಿಕ ಶೇ 50ರಷ್ಟು ಸುಂಕ ವಿಧಿಸಿದ ನಂತರ ಇದೀಗ ಮೆಕ್ಸಿಕೋದ ಸಂಸತ್ತು ಕೂಡ ಭಾರತದಿಂದ ಬರುವ ವಿಸ್ತೃತ ಶ್ರೇಣಿಯ ಆಮದುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸುವುದಕ್ಕೆ ಒಪ್ಪಿಗೆ ನೀಡಿದೆ. ಭಾರತ ಸೇರಿದಂತೆ ಚೀನಾ ಮತ್ತು ಇತರ ಏಷ್ಯಾದ ರಾಷ್ಟ್ರಗಳ ಮೇಲೆ ಮೆಕ್ಸಿಕೊ ಶೇ 50 ರಷ್ಟು ಸುಂಕ ವಿಧಿಸಿದೆ.
ಆಟೊಮೊಬೈಲ್, ಆಟೋ ಭಾಗಗಳು, ಜವಳಿ ಉದ್ಯಮ, ಪ್ಲಾಸ್ಟಿಕ್ಗಳು ಮತ್ತು ಉಕ್ಕು ಮೊದಲಾದ ಸರಕುಗಳ ಮೇಲೆ 2026 ಜನವರಿ 1ರಿಂದ ಕಾರ್ಯರೂಪಕ್ಕೆ ಬರುವಂತೆ ಈ ಸುಂಕ ವಿಧಿಸಲಾಗಿದೆ. ಮೆಕ್ಸಿಕೊ ಜೊತೆಗೆ ವ್ಯಾಪಾರ ಒಪ್ಪಂದವಿಲ್ಲದ ರಾಷ್ಟ್ರಗಳಾದ ಭಾರತ, ದಕ್ಷಿಣ ಕೊರಿಯ, ಥಾಯ್ಲಂಡ್ ಹಾಗೂ ಇಂಡೋನೇಷ್ಯದಂತಹ ದೇಶಗಳ ಮೇಲೆ ಸುಂಕದ ಪರಿಣಾಮವಾಗಲಿದೆ.
ಮೆಕ್ಸಿಕೊ ಸುಂಕ ವಿಧಿಸಲು ಕಾರಣವೇನು?
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್ಬಾಮ್ ಸ್ವದೇಶಿ ಉತ್ಪನ್ನಕ್ಕೆ ಹೆಚ್ಚು ಒತ್ತು ನೀಡಲು ಬಯಸಿದ್ದಾರೆ. ಆದರೆ ವಿಶ್ಲೇಷಕರ ಪ್ರಕಾರ ಅಮೆರಿಕ-ಮೆಕ್ಸಿಕೊ-ಕೆನಡಾ ವ್ಯಾಪಾರ ಒಪ್ಪಂದದ ನವೀಕರಣಕ್ಕೆ ಮೊದಲು ಟ್ರಂಪ್ರನ್ನು ಓಲೈಸಲು ಕ್ಲೌಡಿಯಾ ಶೀನ್ಬಾಮ್ ಈ ನಿರ್ಧಾರ ಕೈಗೊಂಡಿದ್ದಾರೆ. ಮೆಕ್ಸಿಕೊಗೆ ಅಮೆರಿಕ ಅತಿದೊಡ್ಡ ವ್ಯಾಪಾರಿ ಪಾಲುದಾರನಾಗಿದೆ. ಇದೇ ವರ್ಷದ ಆರಂಭದಲ್ಲಿ ಮೆಕ್ಸಿಕೊ ಚೀನಾದ ಸರಕುಗಳ ಮೇಲೆ ಅತಿಯಾದ ಸುಂಕ ವಿಧಿಸಿತ್ತು.
ಕಳೆದ ಕೆಲವು ವಾರಗಳಿಂದ ಟ್ರಂಪ್ ಸರ್ಕಾರ ಮೆಕ್ಸಿಕನ್ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಶೇ 50ರಷ್ಟು ಸುಂಕ ಹೇರುವುದಾಗಿ ಬೆದರಿಕೆ ಒಡ್ಡಿದೆ. ಅಲ್ಲದೆ, ಮೆಕ್ಸಿಕೊದಿಂದ ಅಮೆರಿಕಕ್ಕೆ ಬರುತ್ತಿರುವ ಓಪಿಯಾಯ್ಡ್ ಫೆಂಟನಿಲ್ ಡ್ರಗ್ನ ಹರಿವನ್ನು ತಡೆಯಲು ವಿಫಲವಾದರೆ ಶೇ 25ರಷ್ಟು ಹೆಚ್ಚುವರಿ ಸುಂಕವನ್ನು ಹೇರುವುದಾಗಿ ಟ್ರಂಪ್ ಬೆದರಿಸಿದ್ದರು. ಇದೇ ವಾರದ ಆರಂಭದಲ್ಲಿ ಟ್ರಂಪ್ ಅವರು ಅಮೆರಿಕದ ರೈತರಿಗೆ ನೀರಿನ ಹರಿವನ್ನು ಒದಗಿಸುವ 1944ರ ಒಪ್ಪಂದ ಉಲ್ಲಂಘನೆಗೆ ಮೆಕ್ಸಿಕೊದ ಮೇಲೆ ಹೆಚ್ಚುವರಿ ಶೇ 5ರಷ್ಟು ಸುಂಕವನ್ನು ಹೇರುವುದಾಗಿ ಎಚ್ಚರಿಸಿದ್ದರು.
ಭಾರತದ ಮೇಲೆ ಮೆಕ್ಸಿಕೊದ ಸುಂಕದ ಪರಿಣಾಮ
ಮೆಕ್ಸಿಕೊ ಭಾರತದ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವುದರಿಂದ ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. 2024ರಲ್ಲಿ ದ್ವಿಪಕ್ಷೀಯ ವ್ಯಾಪಾರ 11.7 ಶತಕೋಟಿ ಡಾಲರ್ನಷ್ಟು ಗರಿಷ್ಠ ಮಟ್ಟಕ್ಕೆ ಏರಿತ್ತು. ಮೆಕ್ಸಿಕನ್ ರಫ್ತುಗಳಿಗೆ ಭಾರತ ಒಂಭತ್ತನೇ ಅತ್ಯಧಿಕ ಪಾಲುದಾರನಾಗಿದೆ.
ವರದಿಗಳ ಪ್ರಕಾರ, ಭಾರತ ಮೆಕ್ಸಿಕೊಗೆ 2024ರಲ್ಲಿ 8.9 ಶತಕೋಟಿ ಡಾಲರ್ಗಳ ರಫ್ತು ವ್ಯವಹಾರ ನಡೆಸಿತ್ತು ಮತ್ತು 2.8 ಶತಕೋಟಿ ಡಾಲರ್ಗಳ ಆಮದುಗಳ ವ್ಯವಹಾರ ನಡೆಸಿತ್ತು. ಹೀಗಾಗಿ ಒಟ್ಟು ವಹಿವಾಟು ಭಾರತದ ಪರವಾಗಿ ವಾಲಿತ್ತು. 2024ರಲ್ಲಿ ಭಾರತದಿಂದ ಮೆಕ್ಸಿಕೊ ಕಾರುಗಳು, ಆಟೋ ಭಾಗಗಳು ಮತ್ತು ಇತರ ಪ್ರಯಾಣಿಕ ವಾಹನಗಳನ್ನು ಆಮದು ಮಾಡಿಕೊಂಡಿತ್ತು. ಇದೀಗ ಶೇ 50ರಷ್ಟು ಸುಂಕದಿಂದ ಭಾರತದ ಮುಂದಿನ ವರ್ಷದ ರಫ್ತಿನ ಮೇಲೆ ಪರಿಣಾಮ ಬೀರಲಿದೆ.







