ಮಿಚಿಗನ್: 1940ರಲ್ಲಿ ಸರೋವರದಲ್ಲಿ ಮುಳುಗಿದ್ದ ಸರಕು ನೌಕೆ ಪತ್ತೆ

Photo : facebook.com/people/Meteorologist-Chris-Vickers
ನ್ಯೂಯಾರ್ಕ್: ಅಮೆರಿಕದ ಮಿಚಿಗನ್ ರಾಜ್ಯದ ಸುಪೀರಿಯರ್ ಸರೋವರದಲ್ಲಿ 1940ರಲ್ಲಿ ಮುಳುಗಿದ್ದ ಸರಕು ನೌಕೆಯನ್ನು ಇತ್ತೀಚೆಗೆ ಸರೋವರದ ಆಳದಲ್ಲಿ ಪತ್ತೆಹಚ್ಚಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
244 ಅಡಿ ಉದ್ದದ `ಅರ್ಲಿಂಗ್ಟಾನ್' ಎಂಬ ಹೆಸರಿನ ನೌಕೆ 1940ರ ಎಪ್ರಿಲ್ 30ರಂದು ಅಮೆರಿಕದ ಟೆಕ್ಸಾಸ್ ರಾಜ್ಯದ ಆರ್ಥರ್ ಬಂದರಿನಿಂದ ಕೆನಡಾದ ಒಂಟಾರಿಯೊ ಬಂದರಿಗೆ ಗೋಧಿಯನ್ನು ಸಾಗಿಸುತ್ತಿದ್ದಾಗ ತೀವ್ರ ಸುಂಟರಗಾಳಿಗೆ ಸಿಲುಕಿ ಹಾನಿಗೀಡಾಗಿತ್ತು. ನೌಕೆಯನ್ನು ಕೆನಡಾದ ಯಾವುದಾದರೊಂದು ತೀರಕ್ಕೆ ಸಾಗಿಸುವಂತೆ ನೌಕೆಯ ಮುಖ್ಯ ಇಂಜಿನಿಯರ್ ನೀಡಿದ್ದ ಸಲಹೆಯನ್ನು ನೌಕೆಯ ಕ್ಯಾಪ್ಟನ್ ಫ್ರೆಡ್ರಿಕ್ ಟೇಟೆ ನಿರಾಕರಿಸಿದ್ದ. ಮಿಚಿಗನ್ನ ಸುಪೀರಿಯರ್ ಸರೋವರದಲ್ಲಿ ನೌಕೆ ಮುಳುಗುವ ಲಕ್ಷಣ ಕಂಡುಬಂದಾಗ ಉಳಿದ ಸಿಬಂದಿ ಪಕ್ಕದಲ್ಲಿದ್ದ ಮತ್ತೊಂದು ನೌಕೆಗೆ ಸ್ಥಳಾಂತರಗೊಂಡು ತೀರ ಸೇರಿದರೂ ಕ್ಯಾಪ್ಟನ್ ನೌಕೆ ತೊರೆಯಲು ನಿರಾಕರಿಸಿ ನೌಕೆಯೊಂದಿಗೇ ಸರೋವರದಲ್ಲಿ ಮುಳುಗಿದ್ದ.
ಇದೀಗ ಮಿಚಿಗನ್ನ ಉತ್ತರಕ್ಕೆ 35 ಮೈಲು ದೂರದಲ್ಲಿರುವ ಕೆವೀನಾವ್ ಪರ್ಯಾಯ ದ್ವೀಪದ ಬಳಿಯಿರುವ ಸುಪೀರಿಯರ್ ಸರೋವರದಲ್ಲಿ 600 ಅಡಿಗಿಂತಲೂ ಆಳದಲ್ಲಿ ಪತ್ತೆಹಚ್ಚಲಾಗಿದೆ ಎಂದು ವರದಿಯಾಗಿದೆ.







