ಮೈಕ್ರೋಸಾಫ್ಟ್ ನ ಹಲವು ಸೇವೆಗಳು 10 ಗಂಟೆಗಳಿಗೂ ಹೆಚ್ಚು ಕಾಲ ಸ್ಥಬ್ದ: ಕಂಪೆನಿ ಹೇಳಿದ್ದೇನು?

ಸಾಂದರ್ಭಿಕ ಚಿತ್ರ (Photo: India Today)
ಹೊಸದಿಲ್ಲಿ: ಜಾಗತಿಕವಾಗಿ ಸಾವಿರಾರು ಬಳಕೆದಾರರು ಅವಲಂಬಿಸಿರುವ ಮೈಕ್ರೋಸಾಫ್ಟ್ನ ಹಲವು ಆನ್ಲೈನ್ ಸೇವೆಗಳು ಶುಕ್ರವಾರ 10 ಗಂಟೆಗಳಿಗೂ ಹೆಚ್ಚು ಕಾಲ ಸ್ಥಗಿತಗೊಂಡು ಭಾರಿ ಅಡಚಣೆ ಉಂಟುಮಾಡಿದವು. ಮೈಕ್ರೋಸಾಫ್ಟ್ 365, ಔಟ್ಲುಕ್ ಮತ್ತು ಟೀಮ್ಸ್ ಸೇರಿದಂತೆ ಹಲವು ಅಪ್ಲಿಕೇಶನ್ಗಳ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಬಳಕೆದಾರರು ತೊಂದರೆ ಅನುಭವಿಸಿದರು. ಮೈಕ್ರೋಸಾಫ್ಟ್ 365 ಕನೆಕ್ಟರ್ಗಳ ಮೂಲಕ ಕಾರ್ಯನಿರ್ವಹಿಸುವ ಓಪನ್ಎಐ ಮತ್ತು ಆಂಥ್ರೊಪಿಕ್ ನ ಕೃತಕ ಬುದ್ಧಿಮತ್ತೆ (AI) ಸೇವೆಗಳ ಮೇಲೆಯೂ ಇದರ ಪರಿಣಾಮ ಬೀರಿತು.
ಡೌನ್ಡೆಟೆಕ್ಟರ್ ನಲ್ಲಿ ಔಟ್ಲುಕ್ ಸ್ಥಗಿತದ ಕುರಿತು ಬಂದ ದೂರುಗಳು ಶುಕ್ರವಾರ ಬೆಳಗಿನ ಜಾವ 1.30ರ ವೇಳೆಗೆ ಗರಿಷ್ಠ ಮಟ್ಟ ತಲುಪಿದ್ದವು. ಈ ಸಂದರ್ಭದಲ್ಲಿ 1,38,058 ದೂರುಗಳು ದಾಖಲಾಗಿದ್ದವು. ಬೆಳಿಗ್ಗೆ 4.30ರ ವೇಳೆಗೆ ದೂರುಗಳ ಸಂಖ್ಯೆ ಸುಮಾರು 34,490ಕ್ಕೆ ಇಳಿದಿತ್ತು.
ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೈಕ್ರೋಸಾಫ್ಟ್, ಸಮಸ್ಯೆಗೊಳಗಾದ ಸರ್ವರ್ ಗಳನ್ನು ಪುನಃಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಬಳಕೆದಾರರು ಮತ್ತೆ ಸಂಪರ್ಕ ಸಾಧಿಸುತ್ತಿರುವಂತೆ ಸೇವೆಗಳು ಹಂತಹಂತವಾಗಿ ಚೇತರಿಸಿಕೊಳ್ಳುತ್ತಿವೆ ಎಂದು ತಿಳಿಸಿತ್ತು.
ತನ್ನ ತನಿಖೆಯಲ್ಲಿ, ಸರ್ವರ್ ಗಳಲ್ಲಿ ಸುರಕ್ಷಿತ ಸಂಪರ್ಕಗಳನ್ನು ಸ್ಥಾಪಿಸುವ ಜವಾಬ್ದಾರಿ ಹೊಂದಿರುವ ಪ್ರಕ್ರಿಯೆಯಲ್ಲಿನ ಅಡಚಣೆಯೇ ಸೇವೆಗಳ ವ್ಯತ್ಯಯಕ್ಕೆ ಪ್ರಮುಖ ಕಾರಣ ಎಂಬುದು ತಿಳಿದುಬಂದಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಈ ಪ್ರಕ್ರಿಯೆ ಅತಿಯಾಗಿ ಬೆಳೆಯುತ್ತಿದ್ದ ಕಾರಣ ಸರ್ವರ್ ಗಳು ಬಳಕೆದಾರರ ವಿನಂತಿಗಳನ್ನು ಪ್ರಕ್ರಿಯೆಗೊಳಿಸುವುದನ್ನು ನಿಲ್ಲಿಸಿದ್ದವು ಎಂದು ವಿವರಿಸಿದೆ.
ಸಮಸ್ಯೆ ಪರಿಹರಿಸಲು ಕಾನ್ಫಿಗರೇಶನ್ ಬದಲಾವಣೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಕಂಪೆನಿ ತನ್ನ ಇತ್ತೀಚಿನ ನವೀಕರಣದಲ್ಲಿ ತಿಳಿಸಿತ್ತು. ಮೊದಲಿಗೆ ಸರ್ವರ್ ಗಳ ಒಂದು ಉಪವಿಭಾಗದಲ್ಲಿ ಈ ಬದಲಾವಣೆಯನ್ನು ಪರೀಕ್ಷಿಸಿ, ನಂತರ ವ್ಯಾಪಕವಾಗಿ ಜಾರಿಗೊಳಿಸುವ ಯೋಜನೆ ರೂಪಿಸಲಾಗಿತ್ತು. ಇದರ ಜತೆಗೆ ಸಮಸ್ಯೆಗೊಳಗಾದ ಮೂಲಸೌಕರ್ಯವನ್ನು ಮತ್ತೆ ಸರಿಪಡಿಸುವ ಕ್ರಮವನ್ನೂ ಕೈಗೊಳ್ಳಲಾಗಿತ್ತು.
ಸೇವೆಗಳ ಸ್ಥಗಿತ ಆರಂಭವಾದ ಸಮಯದಲ್ಲೇ ಮಾಡಲಾಗಿದ್ದ ನೆಟ್ವರ್ಕ್ ಕಾನ್ಫಿಗರೇಶನ್ ಬದಲಾವಣೆಯನ್ನೂ ಮೈಕ್ರೋಸಾಫ್ಟ್ ಹಿಂದಕ್ಕೆ ಪಡೆಯುತ್ತಿತ್ತು. ಈ ಬದಲಾವಣೆಯಿಂದಲೇ ವ್ಯತ್ಯಯ ಉಂಟಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿತ್ತು.
ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಕಡಿಮೆ ಪ್ರಮಾಣದ ಸಂಪರ್ಕಗಳನ್ನು ನಿರ್ವಹಿಸುವಾಗ ಸರ್ವರ್ ಗಳು ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಅವುಗಳ ಮೇಲೆ ನಿಗಾ ಇರಿಸಲಾಗಿತ್ತು. ಬಳಿಕ ಹೆಚ್ಚುವರಿ ಸಂಚಾರವನ್ನು ಹಂತಹಂತವಾಗಿ ಮರುಸ್ಥಾಪಿಸುವ ಪ್ರಯತ್ನವನ್ನೂ ಕಂಪೆನಿ ನಡೆಸಿತ್ತು.
ಬಳಕೆದಾರರ ಸಂಚಾರದಲ್ಲಿ ಒಟ್ಟಾರೆ ಹೆಚ್ಚಳವಾಗಿದ್ದರಿಂದ ಸಮಸ್ಯೆ ಉಂಟಾಗಿಲ್ಲ. ಬದಲಿಗೆ, ಸಂಚಾರವನ್ನು ನಿರ್ವಹಿಸಲು ಲಭ್ಯವಿದ್ದ ಸರ್ವರ್ ಗಳ ಸಂಖ್ಯೆ ಕಡಿಮೆಯಾಗಿದ್ದೇ ವ್ಯತ್ಯಯಕ್ಕೆ ಕಾರಣ ಎಂದು ಮೈಕ್ರೋಸಾಫ್ಟ್ ಈ ಹಿಂದೆ ಸ್ಪಷ್ಟಪಡಿಸಿತ್ತು.
"ಬಳಕೆದಾರರು ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಎಕ್ಸ್ಚೇಂಜ್ ಆನ್ಲೈನ್ ನಲ್ಲಿನ ಸಮಸ್ಯೆ ಇದಕ್ಕೆ ಕಾರಣವಾಗಿದೆ" ಎಂದು ಮೈಕ್ರೋಸಾಫ್ಟ್ ವಕ್ತಾರರು ತಿಳಿಸಿದ್ದಾರೆ.
ಎಕ್ಸ್ಚೇಂಜ್ ಆನ್ಲೈನ್ ಮತ್ತು ಇಮೇಲ್ ಮೂಲಸೌಕರ್ಯವನ್ನು ಅವಲಂಬಿಸಿರುವ ಹಲವು ಸೇವೆಗಳ ಮೇಲೆ ಈ ಸ್ಥಗಿತ ಪರಿಣಾಮ ಬೀರಿತ್ತು. ಆದರೆ, ಈ ಮೂಲಸೌಕರ್ಯವನ್ನು ಅವಲಂಬಿಸದ ಇತರ ವೈಶಿಷ್ಟ್ಯಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು.






