ಮಧ್ಯಪ್ರಾಚ್ಯ ಸಂಘರ್ಷ| ಶಾಂತಿ ಮಾತುಕತೆ ಕುರಿತು ಇರಾನ್, ಪಾಕಿಸ್ತಾನ ಚರ್ಚೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್, ಮೇ 21: ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಮತ್ತು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಪ್ರಾದೇಶಿಕ ಬೆಳವಣಿಗೆ ಮತ್ತು ಇರಾನ್-ಅಮೆರಿಕ ಮಾತುಕತೆಯ ಸಂಭಾವ್ಯತೆಗಳನ್ನು ಚರ್ಚಿಸಿದರು ಎಂದು ಇರಾನ್ನ ಸರಕಾರಿ ಸ್ವಾಮ್ಯದ `ಇರ್ನಾ' ಸುದ್ದಿಸಂಸ್ಥೆ ಗುರುವಾರ ವರದಿ ಮಾಡಿದೆ.
ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಬುಧವಾರ ಪಾಕಿಸ್ತಾನದ ಆಂತರಿಕ ಸಚಿವರು ಹಾಗೂ ಇತರ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳು ಮತ್ತು ಇರಾನ್-ಅಮೆರಿಕ ಮಾತುಕತೆಗೆ ಸಂಬಂಧಿಸಿದ ರಾಜತಾಂತ್ರಿಕ ಸಮಾಲೋಚನೆಯನ್ನು ಪರಿಶೀಲಿಸಿದರು. ಎರಡೂ ಕಡೆಯವರು ರಾಜತಾಂತ್ರಿಕ ಸಮಾಲೋಚನೆಯನ್ನು ಮುಂದುವರಿಸುವ ಮತ್ತು ಪ್ರಾದೇಶಿಕ ಸಹಕಾರವನ್ನು ಬಲಪಡಿಸುವ ಅಗತ್ಯಗಳನ್ನು ಒತ್ತಿಹೇಳಿದ್ದಾರೆ ಎಂದು ವರದಿ ಹೇಳಿದೆ.
ಈ ಮಧ್ಯೆ, ತನ್ನ ಪ್ರಸ್ತಾವನೆಗೆ ಸರಿಯಾದ ಉತ್ತರ ದೊರೆಯದಿದ್ದರೆ ಅಮೆರಿಕ ಅತೀ ಶೀಘ್ರದಲ್ಲೇ ಯುದ್ಧವನ್ನು ಪುನರಾರಂಭಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಯುದ್ಧ ಅಂತಿಮ ಹಂತದಲ್ಲಿದೆ. ತಾನು ಕಾಯಲು ಸಿದ್ಧ, ಆದರೆ ಇರಾನ್ ಒಪ್ಪಂದಕ್ಕೆ ಸಮ್ಮತಿಸದಿದ್ದರೆ ದಾಳಿ ಮತ್ತೆ ಆರಂಭಿಸುವುದಾಗಿ ಟ್ರಂಪ್ ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕದ ಇತ್ತೀಚೆಗಿನ ನಿಲುವನ್ನು ಪರಿಶೀಲಿಸುತ್ತಿರುವುದಾಗಿ ಇರಾನ್ ಗುರುವಾರ ಹೇಳಿದೆ. ಇರಾನ್-ಅಮೆರಿಕ ನಡುವಿನ ಶಾಂತಿ ಮಾತುಕತೆಯ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ನ ಉನ್ನತ ನಿಯೋಗಗಳ ನಡುವೆ ಶೃಂಗಸಭೆಯನ್ನು ಆಯೋಜಿಸಿತ್ತು.






