ಮಧ್ಯಪ್ರಾಚ್ಯ ಸಂಘರ್ಷ | ಇರಾನ್ ಜಾಗತಿಕ ಮಟ್ಟದಲ್ಲಿ ಬೆದರಿಕೆ, ಪೋಪ್ ಅದನ್ನು ಅರ್ಥಮಾಡಿಕೊಳ್ಳಬೇಕು: ಟ್ರಂಪ್

PC: screengrab/x.com/upuknews1
ವಾಶಿಂಗ್ಟನ್: ಇರಾನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆದರಿಕೆಯಾಗಿದೆ. ಈ ವಿಚಾರವನ್ನು ಪೋಪ್ ಲಿಯೋ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಪೋಪ್ ಲಿಯೋ ಅವರಿಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಆದರೆ ಇರಾನ್ ಯಾವತ್ತೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅವರು ಗಮನಿಸಬೇಕು ಎಂದು ಟ್ರಂಪ್ ಒತ್ತಿಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಇರಾನ್ ವಿರುದ್ಧ ನಡೆಯುತ್ತಿರುವ ಅಮೆರಿಕ–ಇಸ್ರೇಲ್ ಸಂಘರ್ಷದ ಬಗ್ಗೆ ಪೋಪ್ ಲಿಯೋ ಅವರು ಟೀಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪೋಪ್ ವಿರುದ್ಧ ಟ್ರಂಪ್ ಪದೇಪದೇ ವಾಗ್ದಾಳಿ ನಡೆಸುತ್ತಿದ್ದಾರೆ.
ಪೋಪ್ ಲಿಯೋ ಅವರನ್ನು ನೇಮಿಸಲು ತಾವು ಕಾರಣವೆಂದು ಟ್ರಂಪ್ ಹೇಳಿಕೊಂಡಿದ್ದು, ವಿದೇಶಾಂಗ ನೀತಿಯಲ್ಲಿ ಅವರು ದುರ್ಬಲ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
"ಇದು ಬಹಳ ಸರಳ ವಿಷಯ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಇಲ್ಲವಾದರೆ ಜಗತ್ತು ದೊಡ್ಡ ಅಪಾಯಕ್ಕೆ ಸಿಲುಕುತ್ತದೆ," ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.




