ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿ ಸ್ಥಗಿತ: ಇರಾನ್ ಘೋಷಣೆ

Photo Credit : PTI
ಟೆಹರಾನ್, ಜೂ.8: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೋರಿಕೆಯ ಮೇರೆಗೆ ಇಸ್ರೇಲ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲಾಗಿದೆ. ಒಂದು ವೇಳೆ ಲೆಬನಾನ್ ಅನ್ನು ಮತ್ತೆ ಗುರಿಯಾಗಿಸಿದರೆ ಪ್ರಬಲವಾಗಿ ಪ್ರತಿಕ್ರಿಯಿಸಲಾಗುತ್ತದೆ ಎಂದು ಇರಾನ್ ಸೋಮವಾರ ಘೋಷಿಸಿದೆ.
ಸೋಮವಾರ ಇರಾನ್ ಮತ್ತು ಇಸ್ರೇಲ್ ಪರಸ್ಪರ ವೈಮಾನಿಕ ದಾಳಿ ನಡೆಸಿದ ಬಳಿಕ ತೈಲ ಬೆಲೆ ಗಗನಕ್ಕೇರಿದ್ದು, ಮಧ್ಯಪ್ರಾಚ್ಯದ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಅಮೆರಿಕ-ಇರಾನ್ ಶಾಂತಿ ಮಾತುಕತೆಯನ್ನು ಹಳಿತಪ್ಪಿಸುವ ಭೀತಿ ಮೂಡಿತ್ತು.
‘ದಕ್ಷಿಣ ಲೆಬನಾನ್ ಮತ್ತು ದಹಿಯೆ ಪ್ರದೇಶದಲ್ಲಿ ಕ್ರೂರ ಇಸ್ರೇಲ್ನಿಂದ (ಕ್ರಿಮಿನಲ್ ಅಮೆರಿಕದ ನೆರವಿನಿಂದ ನಡೆಸಲಾದ) ಆಕ್ರಮಣಗಳು ಮತ್ತು ಕಿಡಿಗೇಡಿ ಕೃತ್ಯಗಳನ್ನು ಅನುಸರಿಸಿ, ಇರಾನ್ ನ ಬಲಿಷ್ಠ ಸೇನೆಯು ಲೆಬನಾನ್ನ ತುಳಿತಕ್ಕೊಳಗಾದ ಜನರಿಗೆ ಬೆಂಬಲವಾಗಿ ಶತ್ರುಗಳಿಗೆ ಮಾರಕ ಹೊಡೆತ ನೀಡಿದೆ. ಸಶಸ್ತ್ರ ಪಡೆಗಳ ಕಾರ್ಯಾಚರಣೆಯನ್ನು ಈಗ ಸ್ಥಗಿತಗೊಳಿಸಲಾಗಿದೆ. ಆದರೆ ಆಕ್ರಮಣ ಮತ್ತು ಕಿಡಿಗೇಡಿ ಕೃತ್ಯಗಳು, ದಕ್ಷಿಣ ಲೆಬನಾನ್ ಸೇರಿದಂತೆ, ಮುಂದುವರಿದರೆ ಮೊದಲಿಗಿಂತ ಹೆಚ್ಚು ತೀವ್ರವಾದ ಮತ್ತು ಮಾರಣಾಂತಿಕ ಕ್ರಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಐಆರ್ಜಿಸಿಯ ಕೇಂದ್ರ ಕಚೇರಿಯ ಹೇಳಿಕೆ ತಿಳಿಸಿದೆ.
► ಅಮೆರಿಕ ಹೊಣೆ: ಇರಾನ್
ಲೆಬನಾನ್ನಲ್ಲಿ ಇಸ್ರೇಲ್ನ ಕ್ರಮಗಳಿಗೆ ಅಮೆರಿಕ ನೇರ ಹೊಣೆಯಾಗಿದೆ. ಈ ಪ್ರದೇಶದಲ್ಲಿ ಯಾವುದೇ ಉಲ್ಬಣವು ಅಮೆರಿಕದ ಮೇಲೂ ಪರಿಣಾಮ ಬೀರುತ್ತದೆ ಎಂದು ಇರಾನ್ ದೂಷಿಸಿದೆ.
‘ಲೆಬನಾನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಗಳು ರಾಜತಾಂತ್ರಿಕ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ. ಇರಾನ್ ವಿರುದ್ಧ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಉಲ್ಲಂಘಿಸುವ ಇಸ್ರೇಲ್ನ ಕ್ರಮಗಳಲ್ಲಿ ಅಮೆರಿಕ ನೇರ ಹೊಣೆಯಾಗಿದೆ. ಅಮೆರಿಕದೊಂದಿಗೆ ಸಮನ್ವಯವಿಲ್ಲದೆ ಇಸ್ರೇಲ್ ಆಡಳಿತ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ’ ಎಂದು ಇರಾನ್ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.






